Thursday, 19th September 2024

ಆಶಸ್‌ ಸರಣಿಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯ

ಬ್ರಿಸ್ಬೇನ್‌: ಆಶಸ್‌ ಸರಣಿಯ ಆರಂಭಕ್ಕೆ ಇನ್ನೂ 3 ದಿನ ಇದೆ. ಡಿ.8ರಂದು ಬ್ರಿಸ್ಬೇನ್‌ ಅಂಗಳದಲ್ಲಿ ಮೊದಲ ಟೆಸ್ಟ್‌ ಆರಂಭ ವಾಗಲಿದೆ. ಆಸ್ಟ್ರೇಲಿಯದ ಆಡುವ ಬಳಗವನ್ನು ಅಂತಿಮಗೊಳಿಸಲಾಗಿದೆ.

ಆಸ್ಟ್ರೇಲಿಯವನ್ನು ಮೊದಲ ಸಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುನ್ನಡೆಸಲಿರುವ ವೇಗಿ ಪ್ಯಾಟ್‌ ಕಮಿನ್ಸ್‌ ಹನ್ನೊಂದರ ತಂಡವನ್ನು ಪ್ರಕಟಿಸಿದರು. ಡೇವಿಡ್‌ ವಾರ್ನರ್‌-ಮಾರ್ಕಸ್‌ ಹ್ಯಾರಿಸ್‌ ಇನ್ನಿಂಗ್ಸ್‌ ಆರಂಭಿಸಲಿದ್ದು, ಟ್ರ್ಯಾವಿಸ್‌ ಹೆಡ್‌ 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ ಆಡುವ ಬಳಗದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ ಕಾದು ನೋಡುವ ತಂತ್ರ ಬಳಸಿದೆ. ಬ್ರಿಸ್ಬೇನ್‌ ಹವಾಮಾನ ಗಮನಿಸಿ ತಂಡವನ್ನು ಪ್ರಕಟಿಸಲಾಗುವುದು ಎಂದು ನಾಯಕ ಜೋ ರೂಟ್‌ ಹೇಳಿದ್ದಾರೆ. ಎಡಗೈ ಸ್ಪಿನ್ನರ್‌ ಜಾಕ್‌ ಲೀಚ್‌ ಆಡುವ ಸಾಧ್ಯತೆಯನ್ನು ತೆರೆದಿರಿಸಿದ್ದಾರೆ.

ಆಸ್ಟ್ರೇಲಿಯ : ಡೇವಿಡ್‌ ವಾರ್ನರ್‌, ಮಾರ್ಕಸ್‌ ಹ್ಯಾರಿಸ್‌, ಮಾರ್ನಸ್‌ ಲಬುಶೇನ್‌, ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಕ್ಯಾಮರಾನ್‌ ಗ್ರೀನ್‌, ಅಲೆಕ್ಸ್‌ ಕ್ಯಾರಿ (ವಿ.ಕೀ.), ಪ್ಯಾಟ್‌ ಕಮಿನ್ಸ್‌ (ನಾಯಕ), ಮಿಚೆಲ್‌ ಸ್ಟಾರ್ಕ್‌, ನಥನ್‌ ಲಿಯೋನ್‌, ಜೋಶ್‌ ಹ್ಯಾಝಲ್‌ವುಡ್‌.

ಆಸ್ಟ್ರೇಲಿಯದ ನೂತನ ಟೆಸ್ಟ್‌ ನಾಯಕ ಪ್ಯಾಟ್‌ ಕಮಿನ್ಸ್‌ ಆಶಸ್‌ ಸರಣಿಗೂ ಇಂಗ್ಲೆಂಡ್‌ ನಾಯಕ ಜೋ ರೂಟ್‌ ಅವರ ವಿಕೆಟ್‌ ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಎಂದಿದ್ದಾರೆ.

ಜೋ ರೂಟ್‌ 1986-87ರ ಬಳಿಕ ಆಸ್ಟ್ರೇಲಿಯದಲ್ಲಿ ಇಂಗ್ಲೆಂಡಿನ ಆಶಸ್‌ ಜಯಭೇರಿಯ ಯೋಜನೆಯಲ್ಲಿದ್ದಾರೆ. ಅಂದು ಮೈಕ್‌ ಗ್ಯಾಟಿಂಗ್‌ ಸಾರಥ್ಯದ ಇಂಗ್ಲೆಂಡ್‌ ಕಾಂಗರೂ ನಾಡಿನಲ್ಲಿ ಸರಣಿ ಗೆದ್ದಿತ್ತು. ಎರಡೂವರೆ ವರ್ಷಗಳ ಹಿಂದೆ ಇಂಗ್ಲೆಂಡ್‌ನ‌ಲ್ಲೇ ನಡೆದ ಆಶಸ್‌ ಸರಣಿ 2-2 ಅಂತರದಿಂದ ಸಮನಾಗಿತ್ತು.