Friday, 22nd November 2024

ಆಸೀಸ್‌ ತೆಕ್ಕೆಗೆ ಏಕದಿನ ಸರಣಿ: ಚೇಸಿಂಗ್‌ನಲ್ಲಿ ಎಡವಿದ ಭಾರತ

ಸಿಡ್ನಿ: ಭಾರತ – ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಆರನ್‌ ಫಿಂಚ್ ನಾಯಕತ್ವದ ಆಸೀಸ್ ಪಡೆ 51 ರನ್ ಗಳಿಂದ ಜಯಗಳಿಸಿ, ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲೇ ಮುಖಭಂಗ ಎದುರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಗಿಳಿದ ಆಸ್ಟ್ರೇಲಿಯಾ, 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿ 390 ರನ್ ಗಳ ಬೃಹತ್ ಗುರಿಯನ್ನು ಭಾರತಕ್ಕೆ ನೀಡಿತ್ತು. ಸ್ಟೀವನ್ ಸ್ಮಿತ್ (104 ರನ್, 64 ಎಸೆತ, 14 ಬೌಂಡರಿ, 2 ಸಿಕ್ಸರ್) ಮತ್ತೊಂದು ಸ್ಫೋಟಕ ಶತಕ ಸಿಡಿಸಿದರೆ, ಡೇವಿಡ್ ವಾರ್ನರ್ (83 ರನ್, 77 ಎಸೆತ, 7 ಬೌಂಡರಿ, 3 ಸಿಕ್ಸರ್), ನಾಯಕ ಆರನ್ ಫಿಂಚ್ (60 ರನ್, 69 ಎಸೆತ, 6 ಬೌಂಡರಿ, 1 ಸಿಕ್ಸರ್), ಮಾರ್ನಸ್ ಲಬುಶೇನ್ (70 ರನ್, 61 ಎಸೆತ, 5 ಬೌಂಡರಿ) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (63*ರನ್, 29 ಎಸೆತ, 4 ಬೌಂಡರಿ, 4 ಸಿಕ್ಸರ್) ಸಮರ್ಥ ಬೆಂಬಲ ಒದಗಿಸಿದರು.

ಗುರಿ ಬೆನ್ನಟ್ಟಿದ್ದ ಭಾರತೀಯ ಆಟಗಾರರು ಪ್ರಾರಂಭದಲ್ಲಿ ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್ ಜೋಡಿ ಉತ್ತಮ ಆರಂಭ ನೀಡಿದರು. ಕಮಿನ್ಸ್ ಎಸೆತಕ್ಕೆ ಕೀಪರ್ ಕ್ಯಾರಿ ಕೈಗೆ ಕ್ಯಾಚ್ ಕೊಟ್ಟ ಮಯಾಂಕ್ 28 ರನ್ ಗಳಿಸಿ ಔಟ್ ಆದರು. ಶಿಖರ್ ಧವನ್ 30 ರನ್ ಗಳಿಸಿ ಹ್ಯಾಝಲ್ ವುಡ್ ಎಸೆತದಲ್ಲಿ ಸ್ಟಾರ್ಕ್ ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.

ನಾಯಕ ವಿರಾಟ್ ಕೊಹ್ಲಿ (89 ರನ್, 87 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಕನ್ನಡಿಗ ಕೆಎಲ್ ರಾಹುಲ್ (76 ರನ್, 66 ಎಸೆತ, 4 ಬೌಂಡರಿ, 5 ಸಿಕ್ಸರ್) ಪ್ರತಿಹೋರಾಟದ ನಡುವೆಯೂ ಭಾರತ ತಂಡ 9 ವಿಕೆಟ್‌ಗೆ 338 ರನ್ ಗಳಿಸಲಷ್ಟೇ ಶಕ್ತವಾಯಿತು.

ಆಸೀಸ್ ಪರ ಉಪನಾಯಕ ಪ್ಯಾಟ್ ಕಮಿನ್ಸ್ ಮೂರು ವಿಕೆಟ್ ಕಿತ್ತರೆ, ಜೋಸ್‌ ಹ್ಯಾಜಲ್‌ವುಡ್‌ ಹಾಗೂ ಜಂಪಾ ತಲಾ ಎರಡು ವಿಕೆಟ್ ಕಿತ್ತು, ಟೀಂ ಇಂಡಿಯಾ ರನ್‌ ವೇಗಕ್ಕೆ ನಿಯಂತ್ರಣ ಹೇರಿದರು. ಶತಕವೀರ ಸ್ಟೀವನ್‌ ಸ್ಮಿತ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ಅವರಿಗೆ ಎರಡನೇ ಪ್ರಶಸ್ತಿಯಾಗಿದೆ.

ಸರಣಿಯ ಅಂತಿಮ ಪಂದ್ಯ ಬುಧವಾರ ಕ್ಯಾನ್‌ಬೆರಾದಲ್ಲಿ ನಡೆಯಲಿದೆ.