ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆ ಪರ್ತ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಇಲ್ಲಿನ ಚಾರ್ಲ್ಸ್ ವೆರಿಯಾರ್ಡ್ ರಿಸರ್ವ್‌ನಲ್ಲಿ ಪಂದ್ಯವನ್ನು ನಿರ್ವಹಿಸುತ್ತಿದ್ದ ಆಸ್ಟ್ರೇಲಿಯಾದ ಅಂಪೈರ್(Australian umpire) ಟೋನಿ ಡಿ ನೊಬ್ರೆಗಾ(Tony de Nobrega) ಅವರ ಮುಖಕ್ಕೆ ಚೆಂಡು ಬಡಿದು ತೀವ್ರ ಗಾಯಗೊಂಡಿದ್ದಾರೆ. ಬ್ಯಾಟರ್ ಹೊಡೆದ ಸ್ಟ್ರೈಟ್ ಡ್ರೈವ್ ಹೊಡೆತವೊಂದು ನೊಬ್ರೆಗಾ ಅವರ ಮುಖಕ್ಕೆ ಬಡಿದಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನೊಬ್ರೆಗಾ ಅವರ ಮುಖಕ್ಕೆ ಚೆಂಡು ಬಡಿದದ್ದು ಶನಿವಾರದಂದು. ಆದರೆ ಈ ಘಟನೆ ಬೆಳಕಿಗೆ ಬಂದಿರುವುದು ಅಂಪೈರ್ಸ್ ಅಸೋಸಿಯೇಷನ್‌ನ ಫೇಸ್‌ಬುಕ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಫೋಟೊ ಹಂಚಿಕೊಂಡ ಬಳಿಕ.
ಇದನ್ನೂ ಓದಿ IND vs AUS: ಸ್ಲಿಪ್ ಕ್ಯಾಚ್ ಅಭ್ಯಾಸ ನಡೆಸಿದ ಭಾರತ ತಂಡ
ಚೆಂಡಿನೇಟು ತಿಂದ ನೊಬ್ರೆಗಾ ಅವರ ಮುಖ ಊದಿಕೊಂಡಿರುವ ಫೋಟೊ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಸದ್ಯ ಯಾವುದೇ ಮೂಳೆ ಮುರಿದಿಲ್ಲ ಎಂದು ತಿಳಿದುಬಂದಿದೆ. 2019 ರಲ್ಲಿ, 80 ವರ್ಷದ ಅಂಪೈರ್ ಜಾನ್ ವಿಲಿಯಮ್ಸ್ ವೇಲ್ಸ್ ಬಾಲ್ ಬಡಿದು ಮೃತಪಟ್ಟಿದ್ದರು. ಅದೇ ರೀತಿ, ಇಸ್ರೇಲಿ ಅಂಪೈರ್ ಹಿಲ್ಲೆಲ್ ಆಸ್ಕರ್ ಅವರು 2014 ರಲ್ಲಿ ಚೆಂಡು ಬಡಿದು ಅವರ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದರು.
ಐಪಿಎಲ್ ಸೇರಿದಂತೆ ಕೆಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೆಲ ಅಂಪೈರ್‌ಗಳು ಚೆಂಡು ತಗುಲುವ ಭೀತಿಯಿಂದ ಕೈಗೊಂದು ರಕ್ಷಾ ಕವಚವನ್ನು ಹಾಕಿಕೊಳ್ಳುತ್ತಾರೆ. ಇತ್ತೀಗೆಚೆ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಸಂಜು ಸ್ಯಾಮ್ಸನ್ ಬಾರಿಸಿದ ಸಿಕ್ಸರ್ ಹೊಡೆತವೊಂದು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಮಹಿಳೆಯ ದವಡೆಗೆ ಬಡಿದು ನೋವಿನಿಂದ ಆಕೆ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿತ್ತು.
ನಾಳೆಯಿಂದ ಭಾರತ-ಆಸೀಸ್ ಟೆಸ್ಟ್ ಸರಣಿ
ಕಳೆದ ಎರಡು ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿರುವ ಟೀಮ್ ಇಂಡಿಯಾ ಇದೀಗ ಹ್ಯಾಟ್ರಿಕ್ ಸಾಧನೆ ಮಾಡಲು ಎದುರು ನೋಡುತ್ತಿದೆ ಹಾಗೂ ಮೂರನೇ ಆವತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಪ್ರವೇಶಿಸುವ ಪ್ರಯತ್ನದಲ್ಲಿದೆ. ಅದೇ ರೀತಿ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಲಗ್ಗೆ ಇಡಲು ಆಸ್ಟ್ರೇಲಿಯಾ ತಂಡಕ್ಕೂ ಕೂಡ ಈ ಸರಣಿ ಅತ್ಯಂತ ನಿರ್ಣಾಯಕವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ರೇಸ್‌ನಲ್ಲಿ ಭಾರತ ತಂಡಕ್ಕಿಂದ ಆಸ್ಟ್ರೇಲಿಯಾ ತಂಡ ಉತ್ತಮ ಸ್ಥಾನದಲ್ಲಿದೆ. ಭಾರತ ತಂಡ, ಇತ್ತೀಚೆಗೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-3 ಅಂತರದಲ್ಲಿ ವೈಟ್ ವಾಷ್ ಆಘಾತ ಅನುಭವಿಸಿತ್ತು. ಈ ಸರಣಿಯಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಆದರೆ, ಜಸ್‌ಪ್ರೀತ್ ಬುಮ್ರಾ ಮಾತ್ರ ಅತ್ಯುತ್ತಮವಾಗಿ ಕಂಡಿದ್ದರು.
ಪರ್ತ್ ಟೆಸ್ಟ್‌ಗೆ ರೋಹಿತ್ ಶರ್ಮಾ ಹಾಗೂ ಗಾಯಾಳು ಶುಭಮನ್ ಗಿಲ್ ಅಲಭ್ಯರಾಗಿದ್ದಾರೆ. ಎರಡನೇ ಮಗುವಿನ ಕಾರಣ ರೋಹಿತ್ ಶರ್ಮಾ ಆರಂಭಿಕ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ನಾಯಕ ಜಸ್‌ಪ್ರೀತ್ ಬುಮ್ರಾ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್, ಗಿಲ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆಎಲ್ ರಾಹುಲ್ ಸೇರಿದಂತೆ ಹಿರಿಯ ಆಟಗಾರರ ಮೇಲೆ ಒತ್ತಡ ಜಾಸ್ತಿಯಾಗಿದೆ.