Saturday, 14th December 2024

ಸಿಡಿದ ಅಕ್ಷರ್‌: ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ

ಟ್ರಿನಿಡಾಡ್‌: ಟೀಂ ಇಂಡಿಯಾದ ಆಲ್ರೌಂಡರ್‌ ಅಕ್ಸರ್ ಪಟೇಲ್ ಅರ್ಧಶತಕದ ನೆರವಿನಿಂದ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.

ಪೋರ್ಟ್ ಆಫ್ ಸ್ಪೇನ್ ನಲ್ಲಿ ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಒಡ್ಡಿದ 312 ರನ್ ಗಳ ಕಠಿಣ ಗುರಿ ಬೆಂಬತ್ತಿದ ಭಾರತ 2 ಎಸೆತ ಗಳು ಬಾಕಿ ಇರುವಂತೆಯೇ 8 ವಿಕೆಟ್ ಕಳೆದುಕೊಂಡು ಜುಯಭೇರಿ ಬಾರಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0ಯಿಂದ ವಶ ಪಡಿಸಿಕೊಂಡಿದೆ.

ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ (63), ಸಂಜು ಸ್ಯಾಮ್ಸನ್ (54) ಮತ್ತು ಶುಭಮನ್ ಗಿಲ್ (43) ಹೋರಾಟದ ಹೊರತಾಗಿಯೂ ಭಾರತ ಒಂದು ಹಂತದಲ್ಲಿ 205 ರನ್ ಗೆ 5 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಜೊತೆ ಯಾದ ಅಕ್ಸರ್ ಪಟೇಲ್ ಮತ್ತು ದೀಪಕ್ ಹೂಡಾ 6ನೇ ವಿಕೆಟ್ ಗೆ 51 ರನ್ ಜೊತೆಯಾಟದಿಂದ ತಂಡ ವನ್ನು ಆಧರಿಸಿದರು.

ಅಕ್ಸರ್ ಪಟೇಲ್ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ನೆರವಿನಿಂದ ತಂಡ ವನ್ನು ಗೆಲುವಿನ ದಡ ಸೇರಿಸಿದರು. ಅಕ್ಸರ್ ಪಟೇಲ್ 35 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಿದರು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡ ಶಾಯಿ ಹೋಪ್ ಅವರ ಶತಕದ ನೆರವಿಂದ ಬೃಹತ್ ಮೊತ್ತ ದಾಖಲಿಸಿತು.

ಶಾಯಿ ಹೋಪ್ ಗೆ ಇದು 100ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಶತಕ ಸಿಡಿಸಿದರು. ಹೋಪ್ 135 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 115 ರನ್ ಸಿಡಿಸಿದರು. ಹೋಪ್ 100ನೇ ಪಂದ್ಯದಲ್ಲಿ ಶತಕ ಸಿಡಿಸಿದ ವೆಸ್ಟ್ ಇಂಡೀಸ್ ತಂಡದ ನಾಲ್ಕನೇ ಬ್ಯಾಟ್ಸ್ ಮನ್ ಆಗಿದ್ದಾರೆ.