ಮುಂಬೈ: ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಹತ್ತು ವಿಕೆಟ್ ಕಬಳಿಸಿ, ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ ಗೆ ಮಂಗಳ ಹಾಡಿದರು.
ಈ ಮೂಲಕ, ಒಂದು ಇನ್ನಿಂಗ್ಸ್‌ನಲ್ಲಿ ಹತ್ತು ವಿಕೆಟ್ ಪಡೆದ ಇಂಗ್ಲೆಂಡಿನ ಜಿಮ್ ಲೇಕರ್(೧೯೫೬), ಭಾರತದ ಮಾಜಿ ಸ್ಪಿನ್ ದಂತಕತೆ ಕರ್ನಾಟಕದ ಅನಿಲ್ ಕುಂಬ್ಳೆ (೧೯೯೯) ಸಾಲಿಗೆ ಏಜಾಜ್ ಪಟೇಲ್(೨೦೨೧) ಸೇರ್ಪಡೆಯಾದರು. ಕುಂಬ್ಳೆ ಪಾಕಿಸ್ತಾನದ ವಿರುದ್ದ ಈ ಸಾಧನೆ ಮಾಡಿದ್ದರು.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಮಳೆಯಿಂದಾಗಿ ತಡವಾಗಿ ಆರಂಭವಾದ ಎರಡನೇ ಟೆಸ್ಟ್ ನಲ್ಲಿ ಆರಂಭಿಕ ಮಯಾಂಕ್ ಅಗರ್ವಾಲ್ ೧೫೦ ರನ್ ಗಳಿಸಿ ಮಿಂಚಿದರೆ, ಪ್ರವಾಸಿಗರ ತಂಡದ ಏಜಾಜ್ ಪಟೇಲ್ ಹತ್ತೂ ವಿಕೆಟ್ ಕಬಳಿಸಿ, ವಿಶೇಷ ಸಾಧನೆ ಮಾಡಿದರು.
ಮಯಾಂಕ್ ಹೊರತಾಗಿ, ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಕೂಡ ಅರ್ಧಶತಕ ದಾಖಲಿಸಿ, ತಂಡವನ್ನು ಸುಸ್ಥಿತಿಯಲ್ಲಿ ತಂದು ನಿಲ್ಲಿಸಿದರು.