Friday, 1st November 2024

Babar Azam: ಮಾರ್ಟಿನ್‌ ಸಿನಿಮಾ ನೋಡಿದ ಪಾಕ್‌ ಕ್ರಿಕೆಟಿಗ ಬಾಬರ್‌ ಅಜಂ!

Martin

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ನಟಿಸಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್‌(Martin) ಅಕ್ಟೋಬರ್ 11ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿತ್ತು. ಸದ್ಯಕ್ಕೆ ಕರ್ನಾಟಕದಲ್ಲಿ ‘ಮಾರ್ಟಿನ್’ ಸಿನಿಮಾಗೆ(Martin Box Office Colletion) ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಉತ್ತಮ ಕಲೆಕ್ಷನ್‌ ಕೂಡ ಮಾಡುತ್ತಿದೆ. ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಾಬರ್‌ ಅಜಂ(Babar Azam) ಅವರು ಮಾರ್ಟಿನ್ ಸಿನಿಮಾ ನೋಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.

ಹೌದು, ʼDS ಟೈಮ್ ಬಾಂಬ್ʼ ಎನ್ನುವ ಧ್ರುವ ಸರ್ಜಾ ಅಭಿಮಾನಿ ಬಳಗದ ಟ್ವೀಟರ್‌ ಪೇಜ್‌ನಲ್ಲಿ ಚಿತ್ರಮಂದಿರವೊಂದರಲ್ಲಿ ʼಮಾರ್ಟಿನ್’ ಸಿನಿಮಾದ ಪೋಸ್ಟರ್‌ ಮತ್ತು ಬಾಬರ್‌ ಅಜಂ ಕಾರ್‌ ಬಳಿ ನಿಂತಿರುವ ಫೋಟೊವೊಂದನ್ನು ಶೇರ್‌ ಮಾಡಿದ್ದು, ʼಮಾರ್ಟಿನ್ ಶೋ ನೋಡಲು ಬಾಬರ್ ಅಜಂ ಬಂದಿದ್ದಾರೆʼ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್‌ ಸದ್ಯ ವೈರಲ್‌ ಆಗಿದೆ. ಅಸಲಿಗೆ ಬಾಬರ್‌ ಅಜಂ ಈ ಸಿನಿಮಾ ನೋಡಿದ್ದಾರಾ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ.

ಬಹು ನಿರೀಕ್ಷಿತ ಚಿತ್ರವಾಗಿ ತೆರೆಕಂಡ ʼಮಾರ್ಟಿನ್‌ʼ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಧ್ರುವ ಸರ್ಜಾ ಅಭಿಮಾನಿಗಳು ಹೊರತುಪಡಿಸಿ ಉಳಿದವರು ಅಷ್ಟಾಗಿ ಚಿತ್ರವನ್ನು ಮೆಚ್ಚಿಕೊಂಡಿಲ್ಲ. ಚಿತ್ರಕಥೆಯಲ್ಲಿ ಇನ್ನೋನೋ ಬೇಕಿತ್ತು ಎನ್ನುವುದು ಹಲವರ ಅಭಿಮತ. ಅದಾಗ್ಯೂ ಮೊದಲ ದಿನದ ಕಲೆಕ್ಷನ್‌ನಲ್ಲಿ ತೀರಾ ಹಿಂದೆ ಬಿದ್ದಿಲ್ಲ.

ಇದನ್ನೂ ಓದಿ Martin Box Office Colletion: ತೆರೆ ಮೇಲೆ ಅಬ್ಬರಿಸಿದ ಧ್ರುವ ಸರ್ಜಾ; ʼಮಾರ್ಟಿನ್‌ʼ ಮೊದಲ ದಿನ ಗಳಿಸಿದ್ದೆಷ್ಟು?

ವಿವಿಧ ಭಾಷೆಗಳಲ್ಲಿ ತೆರೆಕಂಡ ʼಮಾರ್ಟಿನ್‌ʼ ಸಿನಿಮಾದ ಮೊದಲ ದಿನದ ಗಳಿಕೆ ಸುಮಾರು 6.2 ಕೋಟಿ ರೂ. ಈ ಪೈಕಿ 5.5 ಕೋಟಿ ರೂ. ಕರ್ನಾಟಕವೊಂದರಿಂದಲೇ ಹರಿದು ಬಂದಿದೆ. ಹಿಂದಿ ಆವೃತ್ತಿ 25 ಲಕ್ಷ ರೂ., ತಮಿಳು ಆವೃತ್ತಿ 5 ಲಕ್ಷ ರೂ. ಮತ್ತು ತೆಲುಗು ಆವೃತ್ತಿ 4 ಲಕ್ಷ ರೂ. ಗಳಿಸಿದೆ. ಶನಿವಾರ ಮತ್ತು ಭಾನುವಾರ ರಜಾ ದಿನವಾಗಿರುವುದರಿಂದ ಸಿನಿಮಾದ ಕಲೆಕ್ಷನ್‌ ಹೆಚ್ಚಾಗುವ ನಿರೀಕ್ಷೆ ಇದೆ.

ಸಿನಿಮಾ ಕಥೆ ಏನು?

ಪಾಕಿಸ್ತಾನದಲ್ಲಿ ಭಾರತೀಯ ವ್ಯಕ್ತಿಯೊಬ್ಬ (ಧ್ರುವ ಸರ್ಜಾ) ಸಿಕ್ಕಿಬೀಳುತ್ತಾನೆ. ಗಾಯಗೊಂಡಿರುವ ಅವನಿಗೆ ಅಲ್ಲಿನ ಮಿಲಿಟರಿ ಪಡೆ ಚಿಕಿತ್ಸೆ ನೀಡಿ, ನಂತರ ಬಂಧಿಸುತ್ತದೆ. ಆದರೆ ಅಮ್ನೇಶಿಯಾದಿಂದಾಗಿ ಆತನಿಗೆ ತಾನು ಯಾರೆಂಬುದೇ ಗೊತ್ತಿರುವುದಿಲ್ಲ. ತನ್ನ ಗುರುತನ್ನು ತಾನೇ ಪತ್ತೆ ಮಾಡುವ ದೊಡ್ಡ ಸವಾಲು ಆತನಲ್ಲಿ ಹುಟ್ಟಿಕೊಳ್ಳುತ್ತದೆ. ತಾನು ಯಾರೆಂಬುದೇ ದೊಡ್ಡ ಪ್ರಶ್ನೆಗೆ ಅಂತಿಮವಾಗಿ ಆತನಿಗೆ ಉತ್ತರ ಸಿಗುತ್ತದೆ. ಆ ಉತ್ತರವೇ ಅರ್ಜುನ್! ಅರೇ, ಈತ ಅರ್ಜುನ್ ಆದರೆ ‘ಮಾರ್ಟಿನ್’ ಯಾರು? ಇದು ಆಡಿಯೆನ್ಸ್‌ಗೆ ಹುಟ್ಟಿಕೊಳ್ಳುವ ಪ್ರಶ್ನೆ. ಹೀಗೆ ಹಲವು ಪ್ರಶ್ನೆಗಳೊಂದಿಗೆ ಸಾಗುವ ‘ಮಾರ್ಟಿನ್’ ಸಿನಿಮಾದಲ್ಲಿ ಭರಪೂರ ಆಕ್ಷನ್ ಇದೆ!