Friday, 22nd November 2024

ಬಾಬರ್ ಅಜಂ ಸರಣಿಶ್ರೇಷ್ಠ ಪ್ರಶಸ್ತಿ ಪಡೆಯಬೇಕಿತ್ತು: ಅಖ್ತರ್‌

ದುಬೈ: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಬಾಬರ್ ಅಜಂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯಬೇಕಿತ್ತು ಎಂದು ಮಾಜಿ ವೇಗಿ ಶೋಯೆಬ್ ಅಖ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಭಾನುವಾರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯ ಅಂತ್ಯವಾಗಿದ್ದು ಆಸ್ಟ್ರೇಲಿಯಾ ತಂಡ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನ್ಯೂಜಿಲೆಂಡ್ ವಿರುದ್ಧ ನಡೆದ ರೋಚಕ ಸೆಣಸಾಟದಲ್ಲಿ ಆಸ್ಟ್ರೇಲಿಯಾ ಭರ್ಜರಿ 8 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ. ಟೂರ್ನಿಯುದ್ದಕ್ಕೂ ನೀಡಿದ ಅದ್ಭುತ ಪ್ರದರ್ಶನದ ಕಾರಣಕ್ಕೆ ಆಸ್ಟ್ರೇಲಿಯಾ ತಂಡದ ಆರಂಭೀಕ ಆಟಗಾರ ಡೇವಿಡ್ ವಾರ್ನರ್  ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಆದರೆ ಪ್ರಶಸ್ತಿಯ ಬಗ್ಗೆ ಮಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಈಗ ಅಪಸ್ವರವೆತ್ತಿದ್ದಾರೆ.

ಬಾಬರ್ ಅಜಂ ಈ ಪ್ರಶಸ್ತಿಗೆ ಭಾಜನವಾಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ತಾನಿದ್ದೆ ಎಂದಿದ್ದಾರೆ ಅಖ್ತರ್. ಬಾಬರ್ ಅಜಂ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಆದರೆ ವಾರ್ನರ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿದ್ದು ನ್ಯಾಯಯುತವಾದ ನಡೆಯಲ್ಲ ಎಂದಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಪಾಲಾಗಿದೆ. ಆಸ್ಟ್ರೇಲಿಯಾದ ಈ ಆರಂಭಿಕ ಆಟಗಾರ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದ್ದಾರೆ. ಆಡಿದ 7 ಪಂದ್ಯಗಳಲ್ಲಿ ವಾರ್ನರ್ ಮೂರು ಅರ್ಧ ಶತಕಗಳ ಸಹಿತ 289 ರನ್‌ಗಳಿಸಿ ಮಿಂಚಿದ್ದಾರೆ.

ನಾಯಕ ಕೇನ್ ವಿಲಿಯಮ್ಸನ್ ಅದ್ಭುತ ಪ್ರದರ್ಶನದಿಂದಾಗಿ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 172 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಡೇವಿಡ್ ವಾರ್ನರ್ ಹಾಗೂ ಶಾನ್ ಮಾರ್ಶ್ ಅದ್ಭುತವಾದ ಜೊತೆಯಾಟ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.