Sunday, 15th December 2024

ಬಾಬರ್ ಆಝಂ ನಾಯಕತ್ವ ತೊರೆಯಲಿ: ಬಸಿತ್ ಅಲಿ

ನವದೆಹಲಿ: ಭಾರತಕ್ಕೆ ವಿರಾಟ್ ಕೊಹ್ಲಿ ಮಾಡಿದಂತೆ ಪಾಕಿಸ್ತಾನದ ನಾಯಕ ಕೂಡ ನಾಯಕತ್ವದಿಂದ ಕೆಳಗಿಳಿಯುವುದನ್ನು ಪರಿಗಣಿಸಬೇಕು ಎಂದು ಪಾಕಿಸ್ತಾನದ ಮಾಜಿ ಬ್ಯಾಟರ್ ಬಸಿತ್ ಅಲಿ ಹೇಳಿದರು.
ನಾಯಕತ್ವ ತೊರೆಯುವುದು ಬಾಬರ್ ಬ್ಯಾಟರ್ ಆಗಿ ತನ್ನ ಪ್ರದರ್ಶನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಬಸಿತ್ ಹೇಳಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಸೋಲು ಪಾಕಿಸ್ತಾನ ತಂಡ ಹಾಗೂ ತಂಡದ ನಾಯಕ ಬಾಬರ್ ಆಝಂಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ತಂಡವನ್ನು ಸತತ ಮೂರು ಸೋಲುಗಳಿಗೆ ದೂಡಿದಕ್ಕಾಗಿ ನಾಯಕ ಬಾಬರ್ ಆಝಂರನ್ನು ಗುರಿಯಾಗಿಸಿಕೊಂಡು ಟೀಕಿಸಲಾಗುತ್ತಿದೆ.

ಅಫ್ಘಾನಿಸ್ತಾನದ ವಿರುದ್ಧ ಸೋತ ನಂತರ ಪಾಕಿಸ್ತಾನದ ವಿಶ್ವಕಪ್ ಅಭಿಯಾನಕ್ಕೆ ಸರಿಯಾದ ಹೊಡೆತ ಬಿದ್ದಿದೆ. ಬಾಬರ್ ಪಡೆಯ ಸೆಮಿಫೈನಲ್ ಅವಕಾಶ ಅಪಾಯದಲ್ಲಿದೆ. ಮೆನ್ ಇನ್ ಗ್ರೀನ್ ಇನ್ನೂ ಸೆಮಿ-ಫೈನಲ್‌ನ ರೇಸ್‌ನಿಂದ ಹೊರಗುಳಿಯದಿದ್ದರೂ, ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯ ಬೇಕಾದರೆ, ಬಾಬರ್ ತಂಡ ತಮ್ಮ ಉಳಿದ ನಾಲ್ಕು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

2021 ರಲ್ಲಿ ಟಿ20 ವಿಶ್ವಕಪ್‌ನಲ್ಲಿ ತಂಡದ ನಿರಾಶಾದಾಯಕ ಅಭಿಯಾನದ ನಂತರ ಕೊಹ್ಲಿ ಭಾರತದ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದರು. ನಂತರ ಏಕದಿನ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ, 2022 ರಲ್ಲಿ ಸ್ವತಃ ಟೆಸ್ಟ್ ನಾಯಕತ್ವ ತ್ಯಜಿಸಿದರು. ಕೊಹ್ಲಿ ತಮ್ಮ ನಾಯಕತ್ವ ತೊರೆಯುವ ಮೊದಲು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್​ನಿಂದಾಗಿ ಭಾರಿ ಟೀಕೆಗೆ ಒಳಗಾಗಿದ್ದರು.