ಢಾಕಾ: ಹೆಂಡತಿ ಕೆಲಸಕ್ಕೆ ಹೋದರೆ ಗಂಡಿನ ಜೀವನ ಸರ್ವನಾಶ ಎಂಬರ್ಥದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಹೇಳಿಕೆ ನೀಡಿದ್ದು ಇದೀಗ ಬಾಂಗ್ಲಾದೇಶದಲ್ಲಿ ಮಹಿಳಾ ಸಂಘಟನೆಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಏಷ್ಯಾಕಪ್ ಕ್ರಿಕೆಟ್ ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ತಮ್ಮ ನಾಲ್ಕನೇ ಎಸೆತದಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದು ಮಿಂಚಿದ್ದ ಬಾಂಗ್ಲಾದೇಶ ಬೌಲರ್ ತಂಜಿಮ್ ಹಸನ್ ಸಾಕಿಬ್ ಹೇಳಿಕೆ ಇರುವ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಮಹಿಳಾ ಮಣಿಯರ ಕೆಂಗಣ್ಣಿಗೆ ತುತ್ತಾಗಿದೆ.
20 ವರ್ಷ ವಯಸ್ಸಿನ ತಂಜಿಮ್ ಹಸನ್ ಸಾಕಿಬ್ ತನ್ನ ಪೋಸ್ಟ್ ನಲ್ಲಿ “ಹೆಂಡತಿ ಕೆಲಸಕ್ಕೆ ಹೋದರೆ, ಗಂಡನ ಹಕ್ಕುಗಳು ಖಾತ್ರಿಯಾಗುವುದಿಲ್ಲ”.. “ಹೆಂಡತಿ ದುಡಿದರೆ ಮಗುವಿನ ಹಕ್ಕು ಖಾತ್ರಿಯಾಗುವುದಿಲ್ಲ, ಹೆಂಡತಿ ದುಡಿದರೆ ಸೊಬಗು ಕೆಡುತ್ತದೆ, ಹೆಂಡತಿ ದುಡಿದರೆ ಸಂಸಾರ ಹಾಳಾಗುತ್ತದೆ, ಹೆಂಡತಿ ದುಡಿದರೆ ಮುಸುಕು ಹಾಳಾಗುತ್ತದೆ, ಹೆಂಡತಿ ದುಡಿದರೆ ಸಮಾಜ ಹಾಳಾಗುತ್ತದೆ ಮತ್ತು ಹಾಳಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
“ವಿಶ್ವವಿದ್ಯಾಲಯದಲ್ಲಿ ತನ್ನ ಪುರುಷ ಸ್ನೇಹಿತರೊಂದಿಗೆ ಮುಕ್ತವಾಗಿ ಬೆರೆಯಲು ಒಗ್ಗಿಕೊಂಡಿರುವ ಮಹಿಳೆಯನ್ನು ಮದುವೆಯಾದರೆ ಅವರ ಪುತ್ರರಿಗೆ “ಸಾಧಾರಣ” ತಾಯಿ ಇರುವುದಿಲ್ಲ ಎಂದು ಪುರುಷರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಪೋಸ್ಟ್ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸ್ತ್ರೀದ್ವೇಷದ ಹೇಳಿಕೆ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಬೆಳಕಿಗೆ ಬಂದ ನಂತರ ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಸ್ತ್ರೀವಾದಿಗಳು ವ್ಯಾಪಕ ಟೀಕೆ ಮಾಡುತ್ತಿದ್ದಾರೆ.