ನವದೆಹಲಿ: 1983ರ ವಿಶ್ವ ಕಪ್ ವಿಜೇತ ಟೀಂ ಇಂಡಿಯಾ ಹೀರೋ, ಬೆಂಗಳೂರಿನ ರೋಜರ್ ಬಿನ್ನಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.
ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಧಿಕಾರವಧಿ ಅ.18 ರಂದು ಅಂತ್ಯಗೊಳ್ಳಲಿದೆ. ಹಲವು ಸುತ್ತಿನ ಚರ್ಚೆಯ ನಂತರ 67 ವರ್ಷದ ಬೆಂಗಳೂರಿನ ರೋಜರ್ ಬಿನ್ನಿ ಬಿಸಿಸಿಐನ 36ನೇ ಅಧ್ಯಕ್ಷರಾಗಲು ನಿರ್ಧರಿಸ ಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯ ದರ್ಶಿಯಾಗಿ ಎರಡನೇ ಅವಧಿಗೆ ಮುಂದುವರೆಯಲಿದ್ದಾರೆ. ಐಸಿಸಿ ಮಂಡಳಿಯಲ್ಲಿ ಗಂಗೂಲಿ ಬದಲಿಗೆ ಜಯ್ ಶಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ರಾಜೀವ್ ಶುಕ್ಲಾ ಉಪಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಸಿಂದ್ ಧುಮಲ್ ಇದೀಗ ಐಪಿಎಲ್ ಮುಖ್ಯಸ್ಥರಾಗಲಿದ್ದಾರೆ. ಬ್ರಿಜೇಶ್ ಪಾಟೇಲ್ ಜಾಗಕ್ಕೆ ಧುಮಲ್ ಬರಲಿದ್ದಾರೆ. ಮಹಾರಾಷ್ಟ್ರ ಬಿಜೆಪಿ ಮುಖಂಡ ಅಶಿಶ್ ಶೆಲರ್ ನೂತನ ಖಜಾಂಚಿಯಾಗಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಆಪ್ತ ದೇವಜಿತ್ ಸೈಕಿಯಾ ನೂತನ ಜಂಟಿ ಕಾರ್ಯದರ್ಶಿ ಯಾಗಿದ್ದಾರೆ.
ರೋಜರ್ ಬಿನ್ನಿ ಅಕ್ಟೋಬರ್ 18 ರಂದು ಮುಂಬೈನ ಎಜಿಎಂನಲ್ಲಿ ಅಧಿಕಾರ ವಹಿಸಿಕೊಳ್ಳುವರು. ಭಾರತ ತಂಡ 1983ರ ವಿಶ್ವಕಪ್ ಗೆಲ್ಲುವಲ್ಲಿ ರೋಜರ್ ಬಿನ್ನಿ ಪ್ರಮುಖ ಪಾತ್ರ ನಿರ್ವಹಿಸಿದರು.
ಐಪಿಎಲ್ ಮುಖ್ಯಸ್ಥ ಸ್ಥಾನ ತಿರಸ್ಕರಿಸಿದ ಗಂಗೂಲಿ: ಬಿಸಿಸಿಐ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮುಂದುವರೆಯಲು ಬಯಸಿದ್ದರು ಎನ್ನಲಾಗಿದೆ.