Thursday, 12th December 2024

ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಇಂದು: ಪಡಿಕ್ಕಲ್‌, ಶಾ ಆಡೋದು ಡೌಟು

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ಕ್ರಿಕೆಟ್ ತಂಡದ ಆಯ್ಕೆಯು ಭಾನುವಾರ ನಡೆಯಲಿದೆ ಎಂದು ವರದಿಯಾಗಿದೆ. ಆದರೆ, ಅಮೋಘ ಲಯದಲ್ಲಿರುವ ಕರ್ನಾಟಕದ ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್‌ಗೆ ಅವಕಾಶ ಸಿಗುವುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಲಾಗಿದೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಪಡಿಕ್ಕಲ್, ಸತತ ನಾಲ್ಕು ಶತಕಗಳ ಸಾಧನೆ ಮಾಡಿದ್ದರು. ರನ್ ಬೇಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಪಡಿಕ್ಕಲ್ ಏಳು ಪಂದ್ಯಗಳಲ್ಲಿ 147.40ರ ಸರಾಸರಿಯಲ್ಲಿ ಒಟ್ಟು 737 ರನ್ ಕಲೆ ಹಾಕಿದ್ದರು.

ಮುಂಬೈ ನಾಯಕ ಪೃಥ್ವಿ ಶಾ ಕೂಡಾ ಏಳು ಪಂದ್ಯಗಳಲ್ಲಿ 754 ರನ್ ಸಂಪಾದಿಸಿರುವ ಪೃಥ್ವಿ, ಮಗದೊಮ್ಮೆ ಟೀಮ್ ಇಂಡಿಯಾ ಬಾಗಿಲು ತಟ್ಟುತ್ತಿದ್ದಾರೆ. ಹಾಗಿದ್ದರೂ ಈ ಯುವ ಆಟಗಾರರು ತಮ್ಮ ಅವಕಾಶಕ್ಕಾಗಿ ಮತ್ತಷ್ಟು ಕಾಯಬೇಕಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು ಭಾನುವಾರ ಘೋಷಿಸುವ ಸಾಧ್ಯತೆಯಿದೆ.

ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಸೇರಿದ ಹಿರಿಯ ಆಟಗಾರರು ವಿಶ್ರಾಂತಿ ಬಯಸಿಲ್ಲ.

ಪುಣೆಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯು ಆಯೋಜನೆಯಾಗಲಿದೆ. ಈ ಪಂದ್ಯಗಳು ಅಹರ್ನಿಶಿಯಾಗಿ ಸಾಗಲಿದ್ದು, ಅನುಕ್ರಮವಾಗಿ ಮಾರ್ಚ್ 23, 26 ಹಾಗೂ 28ರಂದು ನಡೆಯಲಿದೆ.