Tuesday, 19th November 2024

BGT 2024-25: ಭಾರತ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ಎಕ್ಸ್‌ ಫ್ಯಾಕ್ಟರ್‌ ವೇಗಿ ಎಂದ ಟ್ರಾವಿಸ್‌ ಹೆಡ್‌!

'Jasprit Bumrah is India’s X-factor, going to be difficult over the summer'-Travis Head

ಪರ್ತ್: ಆಪ್ಟಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ (BGT 2024-25) ಜಸ್‌ಪ್ರೀತ್‌ ಬುಮ್ರಾ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮಹತ್ವದ ಸರಣಿಗೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್, ಬುಮ್ರಾ ಅವರನ್ನು ‘ಎಕ್ಸ್ ಫ್ಯಾಕ್ಟರ್’ ಎಂದು ಬಣ್ಣಿಸಿದ್ದಾರೆ. ಆದರೆ ಮಾಜಿ ವೇಗದ ಬೌಲರ್ ಬ್ರೆಟ್ ಲೀ, ಬುಮ್ರಾ ಸದ್ಯ ಬೆಕ್ಕಿನಂತೆ ಶಾಂತವಾಗಿದ್ದಾರೆ ಮತ್ತು ಇದ್ದಕ್ಕಿದ್ದಂತೆ ದಾಳಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದ ಹಲವು ಹಿರಿಯ ಕ್ರಿಕೆಟಿಗರು ಜಸ್‌ಪ್ರೀತ್‌ ಬುಮ್ರಾ ಅವರನ್ನು ಹೊಗಳಿದ್ದಾರೆ. 1970 ರ ದಶಕದ ನಂತರ ಇದೇ ಮೊದಲ ಬಾರಿ ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್‌ಗಳಿಗೆ ವೇಗದ ಬೌಲರ್ ದೊಡ್ಡ ಸವಾಲಾಗಿ ಹೊರಹೊಮ್ಮಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಹೇಳುತ್ತಿವೆ. ಕಳೆದ ಎರಡು ಪ್ರವಾಸಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಸ್‌ಪ್ರೀತ್‌ ಬುಮ್ರಾ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು 2018ರ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅವರ 6 ವಿಕೆಟ್‌ಗಳನ್ನು ಕೂಡ ಒಳಗೊಂಡಿದೆ.

IND vs AUS: ಬಾರ್ಡರ್‌-ಗವಾಸ್ಕರ್‌ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

‘ಫಾಕ್ಸ್ ಕ್ರಿಕೆಟ್’ ಜೊತೆ ಮಾತನಾಡಿದ ಟ್ರಾವಿಸ್‌ ಹೆಡ್‌, “ಅವರನ್ನು (ಜಸ್‌ಪ್ರೀತ್‌ ಬುಮ್ರಾ) ಎದುರಿಸುವುದು ಬಹುತೇಕ ಅಸಾಧ್ಯ. ನೀವು ಒಂದು ಹೆಜ್ಜೆ ಮುಂದಿರುವಿರಿ ಎಂದು ನೀವು ಭಾವಿಸುತ್ತೀರಿ ಆದರೆ ಅವರು ಯಾವಾಗಲೂ ನಿಮಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಅವರು ಕ್ರಿಕೆಟ್‌ನ ಪ್ರತಿಯೊಂದು ಸ್ವರೂಪದಲ್ಲೂ ಅದ್ಭುತ. ಬುಮ್ರಾ ಭಾರತ ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಗಿದ್ದಾರೆ ಮತ್ತು ಪ್ರತಿ ಪಂದ್ಯದಲ್ಲೂ ತಮ್ಮ ಗುರುತು ಬಿಡುತ್ತಾರೆ. ದೊಡ್ಡ ಪಂದ್ಯಗಳಿಗೆ ನಿಮಗೆ ದೊಡ್ಡ ಆಟಗಾರರ ಅಗತ್ಯವಿದೆ ಮತ್ತು ಅವರು ದೊಡ್ಡ ಆಟಗಾರ. ಅವರು ಬ್ಯಾಟ್ಸ್‌ಮನ್‌ಗಳ ಸಂಕಷ್ಟಕ್ಕೆ ಕಾರಣರಾಗಿದ್ದಾರೆ,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಮ್ರಾ ಬೌಲಿಂಗ್ ಕ್ರಮ ವಿಭಿನ್ನವಾಗಿದೆ

“ಅವರು (ಜಸ್‌ಪ್ರೀತ್‌ ಬುಮ್ರಾ) ಬೆಕ್ಕಿನಂತೆ ಸದ್ದಿಲ್ಲದೆ ಬರುತ್ತಾರೆ,” ಎಂದು ಬ್ರೆಟ್‌ ಲೀ ತಮಾಷೆ ಮಾಡಿದ್ದಾರೆ. ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ, “ನಾನು ಮೊದಲ ಬಾರಿಗೆ ಜಸ್‌ಪ್ರೀತ್‌ ಬುಮ್ರಾ ಅವರನ್ನು ಎದುರಿಸಿದಾಗ, ಅವರು ಇದ್ದಕ್ಕಿದ್ದಂತೆ ಎಲ್ಲಿಂದ ಬಂದರು ಎಂದು ನಾನು ಯೋಚಿಸಿದೆ. ಮಿಚೆಲ್‌ ಜಾನ್ಸನ್‌ ಅವರ ರೀತಿ ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ಕ್ರಿಯೆ ಮತ್ತು ಚೆಂಡನ್ನು ಬಿಡುವ ರೀತಿಯಿಂದಾಗಿ ಅವರು ಸ್ವಲ್ಪ ಬೇಗನೆ ಬರುತ್ತಾರೆ,” ಎಂದು ತಿಳಿಸಿದ್ದಾರೆ.

IND vs AUS: ಮೊದಲ ಟೆಸ್ಟ್‌ಗೆ ರೋಹಿತ್‌, ಗಿಲ್‌, ರಾಹುಲ್‌ ಅಲಭ್ಯ!

ಜಸ್‌ಪ್ರೀತ್‌ ಬುಮ್ರಾ ವಿರುದ್ಧ 56.67ರ ಸರಾಸರಿಯಲ್ಲಿ ಸ್ಕೋರ್ ಮಾಡಿರುವ ಸ್ಟೀವ್ ಸ್ಮಿತ್ ಮಾತನಾಡಿ, “ಜಸ್‌ಪ್ರೀತ್‌ ಬುಮ್ರಾ ಅವರ ಬೌಲಿಂಗ್‌ ಕ್ರಮವು ಸ್ವಲ್ಪ ವಿಭಿನ್ನವಾಗಿದೆ. ಅವರಿಗೆ ಆಡಿ ಅಭ್ಯಾಸವಾಗಲು ಸಮಯ ತೆಗೆದುಕೊಳ್ಳಬೇಕಾಗುತ್ತದೆ. ನಾವು ಅವರ ವಿರುದ್ಧ ತುಂಬಾ ಆಡಿದ್ದೇವೆ ಆದರೆ ಅವರನ್ನು ಕಟ್ಟಿ ಹಾಕಲು ಇನ್ನೂ ಸಮಯ ತೆಗೆದುಕೊಳ್ಳಬೇಕಾಗುತ್ತದೆ,” ಎಂದು ಹೇಳಿದ್ದಾರೆ.