Sunday, 15th December 2024

Border Gavaskar Trophy: ಈ ಬಾರಿ ಭಾರತವನ್ನು ಕ್ಲೀನ್‌ಸ್ವೀಪ್ ಮಾಡುತ್ತೇವೆ ಎಂದ ಆಸೀಸ್‌ ಬೌಲರ್

Border Gavaskar Trophy

ಸಿಡ್ನಿ: ಇದೇ ವರ್ಷಾಂತ್ಯದಲ್ಲಿ ಭಾರತ ತಂಡ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್(Border Gavaskar Trophy)​ ಟೆಸ್ಟ್​ ಸರಣಿಯನ್ನಾಡಲು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಆಸೀಸ್‌ ಆಟಗಾರರು ಭಾರತದ ಆತ್ಮವಿಶ್ವಾಸವನ್ನು ಕುಗ್ಗಿಸಲು ಮೈಂಡ್ ಗೇಮ್ ಆರಂಭಿಸಿದ್ದಾರೆ. ಇದೀಗ ಈ ಸಾಲಿಗೆ ಸ್ಪಿನ್ನರ್‌ ನಥನ್‌ ಲಿಯೋನ್‌(Nathan Lyon) ಸೇರ್ಪಡೆಗೊಂಡಿದ್ದಾರೆ. ಭಾರತವನ್ನು 5-0 ಅಂತರದಿಂದ ಸೋಲಿಸಲಿದ್ದೇವೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಅಲಿಸ್ಸಾ ಹೀಲಿ ಅವರ ಜತೆಗಿನ ವಿಲ್ಲೋ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಲಿಯೋನ್‌, “ಭಾರತ ತಂಡ ಇತ್ತೀಗೆಚೆ ಆಡುತ್ತಿರುವ ಎಲ್ಲ ಟೆಸ್ಟ್‌ ಪಂದ್ಯಗಳನ್ನು ನಾನು ಸೂಕ್ಷವಾಗಿ ಗಮನಿಸಿದ್ದೇನೆ. ಈ ಬಾರಿ ಬಾರ್ಡರ್‌-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು 5-0 ಅಂತರದಲ್ಲಿ ಸೋಲಿಸಲು ನಮ್ಮ ತಂಡದ ಆಟಗಾರರು ಎಲ್ಲ ಪೂರ್ವ ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.‌

ಇದನ್ನೂ ಓದಿ IND vs BAN: ಮೊದಲ ಟೆಸ್ಟ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡದ ವರದಿ ಹೀಗಿದೆ

ನಥನ್‌ ಲಿಯೋನ್‌ ಭಾರತದ ಎದುರು 27 ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಪಂದ್ಯಗಳನ್ನು ಆಡಿ 121 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕೆಲ ದಿನಗಳ ಹಿಂದೆ ಆಸೀಸ್​ ವೇಗಿ ಸ್ಕಾಟ್​ ಬೋಲ್ಯಾಂಡ್(Scott Boland), “ನಾವು ಉತ್ತಮ ದರ್ಜೆಯ ಬೌಲಿಂಗ್ ದಾಳಿಯನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಈ ಬಾರಿ ಭಾರತಕ್ಕೆ ಆಸೀಸ್​ ನಲದಲ್ಲಿ ಸರಣಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಕೊಹ್ಲಿಯ ವಿಕೆಟ್​ ಪಡೆಯಲು ನಾನು ಕಾತರಗೊಂಡಿದ್ದೇನೆ” ಎಂದು ಹೇಳಿದ್ದರು.

5 ಪಂದ್ಯಗಳ ಈ ಟೆಸ್ಟ್​ ಸರಣಿ ನವೆಂಬರ್ 22ರಿಂದ ಜನವರಿ(2025) 7ರವರೆಗೆ ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಈ ಪಂದ್ಯಗಳು ನಡೆಯಲಿದೆ. ಅಡಿಲೇಡ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಆಗಿದೆ.

2018-19ರಲ್ಲಿ ಮೊಟ್ಟ ಮೊದಲ ಬಾರಿ ವಿರಾಟ್‌ ಕೊಹ್ಲಿ ಸಾರಥ್ಯದ ಭಾರತ ತಂಡ, ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಸರಣಿಯನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ನಂತರ 2020-21ರಲ್ಲಿ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ ನೇತೃತ್ವದಲ್ಲಿ ಎರಡನೇ ಬಾರಿ ಸರಣಿ ಗೆದ್ದ ಸಾಧನೆ ಮಾಡಿತ್ತು. 2014-15ರ ಸಾಲಿನಿಂದ ಇಲ್ಲಿಯವರೆಗೂ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಟೆಸ್ಟ್‌ ಸರಣಿ ಗೆದ್ದಿಲ್ಲ. ಅಂದಿನಿಂದ ಇಲ್ಲಿಯವರೆಗೂ ಭಾರತ ತಂಡ ಸತತವಾಗಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಪ್ರಾಬಲ್ಯ ಮೆರೆದಿದೆ. ಈ ಬಾರಿ ಗೆದ್ದರೆ ಹ್ಯಾಟ್ರಿಕ್‌ ಸಾಧನೆ ಮಾಡಲಿದೆ.

ಕೊಹ್ಲಿ 2011 ರಿಂದ 2023ರ ತನಕ ಆಡಿದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಪಂದ್ಯಗಳಲ್ಲಿ ಪಟ್ಟು 1,979 ರನ್​ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ 7ನೇ ಸ್ಥಾನಿಯಾಗಿದ್ದಾರೆ. ಚೇತೇಶ್ವರ್​ ಪೂಜಾರ 2,033 ರನ್​ ಬಾರಿಸಿ 6ನೇ ಸ್ಥಾನಿಯಾಗಿದ್ದಾರೆ. 3,262 ರನ್​ ಬಾರಿಸಿರುವ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಅಗ್ರಸ್ಥಾನ ಪಡೆದಿದ್ದಾರೆ.