ಮುಂಬಯಿ: ಆಸ್ಟ್ರೇಲಿಯಾ ಪ್ರವಾಸಕ್ಕೂ(Border-Gavaskar Trophy) ಮುನ್ನ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿಯ(Virat Kohli) ಬ್ಯಾಟಿಂಗ್ ಫಾರ್ಮ್ ಬಗ್ಗೆ ಟೀಕಿಸಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್(Ricky Ponting) ವಿರುದ್ಧ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಆಡುವವರು ಕಳೆದ ಐದು ವರ್ಷಗಳಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿರುವವರು ಬಹುಶಃ ಯಾರು ಇರಲಕ್ಕಿಲ್ಲ ಎಂದು ಕೊಹ್ಲಿಯನ್ನು ಪಾಂಟಿಂಗ್ ಟೀಕಿಸಿದ್ದರು.
ಈ ಕುರಿತು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ ಗೌತಮ್ ಗಂಭೀರ್, ಪಾಂಟಿಂಗ್ಗೂ ಭಾರತೀಯ ಕ್ರಿಕೆಟ್ಗೂ ಏನು ಸಂಬಂಧ? ಅವರು ಆಸ್ಟ್ರೇಲಿಯಾ ಕ್ರಿಕೆಟ್ ಬಗ್ಗೆ ಮೊದಲು ಯೋಚಿಸಬೇಕು ಎಂದು ಭಾವಿಸುತ್ತೇನೆ. ನಮ್ಮ ತಂಡದ ಆಟಗಾರರ ಸಾಮರ್ಥ್ಯ ಏನೆಂಬುವುದು ನಮಗೆ ತಿಳಿದಿದೆ ಎಂದು ಹೇಳುವ ಮೂಲಕ ಪಾಂಟಿಂಗ್ಗೆ ತಕ್ಕ ತಿರುಗೇಟು ನೀಡಿದ್ದಾರೆ.
ವಿರಾಟ್ ವಿಶ್ವ ದರ್ಜೆಯ ಕ್ರಿಕೆಟಿಗ ಎಂಬ ನನ್ನ ಆಲೋಚನೆಗಳು ಯಾವಾಗಲೂ ಸ್ಪಷ್ಟವಾಗಿವೆ. ಇಷ್ಟು ಸುದೀರ್ಘ ಅವಧಿಗೆ ಅವರು ಪ್ರದರ್ಶನ ನೀಡಿದ್ದಾರೆ. ರನ್ ಗಳಿಸಬೇಕೆಂಬ ಅವರ ಹಸಿವು ಯಾವಾಗಲೂ ಅವರಲ್ಲಿ ಇರುತ್ತದೆ, ಆ ಹಸಿವೆಯೇ ಅವರನ್ನು ವಿಶ್ವ ದರ್ಜೆಯ ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಆಸ್ಟ್ರೇಲಿಯಾದಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ IND vs AUS: ರೋಹಿತ್ ಅಲಭ್ಯರಾದರೆ ಬುಮ್ರಾ ನಾಯಕ; ಕೋಚ್ ಗಂಭೀರ್
ಒಂದು ಕಳಪೆ ಪಂದ್ಯ ಅಥವಾ ಸರಣಿಯ ಆಧಾರದ ಮೇಲೆ ಆಟಗಾರನನ್ನು ಅಥವಾ ತಂಡದ ಸಾಮರ್ಥ್ಯವನ್ನು ನಿರ್ಣಯಿಸಬಾರದು. ನ್ಯೂಜಿಲ್ಯಾಂಡ್ ಸರಣಿ ಸೋಲಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ಟ್ರೋಲ್ ಮತ್ತು ಟೀಕೆಗಳ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಪ್ರತಿಯೊಬ್ಬರಿಗೂ ಪ್ರತಿದಿನವೂ ಉತ್ತಮವಾಗಿರುವುದಿಲ್ಲ. ನಮ್ಮಲ್ಲಿರುವ ಉತ್ಸಾಹದ ರೀತಿಯೆಂದರೆ ನಾವು ನಮ್ಮ ಆಟಗಾರರನ್ನು ಬೆಂಬಲಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ಆಟಗಾರರಿಗೆ ಬೆಂಬಲ ನೀಡುವುದು ನನ್ನ ಕೆಲಸ. ನನ್ನ ಕೆಲಸ ಯಾರನ್ನೂ ಕೈಬಿಡದೆ, ಅತ್ಯುತ್ತಮವಾದ 11 ಆಟಗಾರರನ್ನು ಆಯ್ಕೆಮಾಡುವುದು ಎಂದರು.
ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮ ಅಲಭ್ಯರಾದರೆ ಇವರ ಅನುಪಸ್ಥಿತಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಗಂಭೀರ್ ಖಚಿತಪಡಿಸಿದ್ದಾರೆ. ಆದ್ಯಾಗೂ ರೋಹಿತ್ ಅಲಭ್ಯತೆ ಬಗ್ಗೆ ಸ್ಪಷ್ಟ ಉತ್ತರ ನೀಡಲಿಲ್ಲ. ಈಗಾಗಲೇ ಟೀಮ್ ಇಂಡಿಯಾದ ಮೊದಲ ಬ್ಯಾಚ್ ಆಸ್ಟ್ರೇಲಿಯಾ ತಲುಪಿದ್ದು ಎರಡನೇ ಬ್ಯಾಚ್ ಇಂದು ತೆರಳಲಿದೆ.