ಬೆಂಗಳೂರು: ಯಾವಾಗ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ಕ್ರಿಕೆಟ್ ತಂಡ ತವರಿನಲ್ಲೇ ಆಸ್ಟ್ರೇಲಿಯನ್ನರ ಗರ್ವಭಂಗ ಮಾಡಿತೋ ಅಂದಿನಿಂದ ಭಾರತ- ಆಸೀಸ್(India vs Australia) ನಡುವಿನ ಬಾರ್ಡರ್- ಗವಾಸ್ಕರ್(Border Gavaskar Trophy) ಟ್ರೋಫಿ ಅತ್ಯಂತ ಜಿದ್ದಾಜಿದ್ದಿನ ಟೆಸ್ಟ್ ಸರಣಿಯಾಗಿ ಮಾರ್ಪಟ್ಟಿತು. ಆ್ಯಷಸ್ ಹೊರತುಪಡಿಸಿದರೆ ಅತೀ ಹೆಚ್ಚು ಜನರನ್ನು ಸೆಳೆಯುವ, ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೀಮಂತ ಸರಣಿಗಳಲ್ಲಿ ಇದೂ ಕೂಡ ಒಂದಾಯಿತು.
ಆಸೀಸ್ನಲ್ಲಿ ಸತತವಾಗಿ 2 ಬಾರಿ ಸರಣಿ ಗೆದ್ದಿರುವ ಭಾರತ ಇದೀಗ ಮತ್ತೆ ಆಸೀಸ್ ಪ್ರವಾಸ ಕೈಗೊಂಡಿದೆ. ಈ ಬಾರಿ 5 ಪಂದ್ಯಗಳನ್ನು ಆಡಲಿದೆ. ಇದು 32 ವರ್ಷಗಳ ಬಳಿಕ ಇತ್ತಂಡಗಳ ನಡುವೆ ನಡೆಯುವ 5 ಪಂದ್ಯಗಳ ಟೆಸ್ಟ್ ಸರಣಿ ಇದಾಗಿದೆ. ಈ ಪ್ರತಿಷ್ಠಿತ ಕದನಕ್ಕಾಗಿ ಕ್ರಿಕೆಟ್ ವಿಶ್ವ ಕಾತರದಿಂದ ಕಾಯುತ್ತಿದೆ. ಇದುವರೆಗಿನ ಉಭಯ ತಂಡಗಳ ಬಾರ್ಡರ್- ಗವಾಸ್ಕರ್ ಸರಣಿಯ ಇತಿಹಾಸದ ಇಣುಕು ನೋಟ ಇಲ್ಲಿದೆ.
ಭಾರತ- ಆಸ್ಟ್ರೇಲಿಯಾ ತಂಡಗಳು 1947ರಿಂದಲೂ ಟೆಸ್ಟ್ ಕ್ರಿಕೆಟ್ನಲ್ಲಿ ಮುಖಾಮುಖಿಯಾಗುತ್ತಿದೆ. 1947ರಿಂದ 1996ರವರೆಗೆ ಸುಮಾರು 50 ಟೆಸ್ಟ್ ಪಂದ್ಯಗಳಲ್ಲಿ ಇತ್ತಂಡಗಳು ಮುಖಾಮುಖಿಯಾಗಿದೆ. 1996ರಲ್ಲಿ ಈ ಸರಣಿಗೆ ಇಂಡೋ-ಆಸೀಸ್ ದಿಗ್ಗಜರಾದ ಅಲನ್ ಬಾರ್ಡರ್ ಮತ್ತು ಸುನೀಲ್ ಗವಾಸ್ಕರ್ ಹೆಸರಿಡಲಾಯಿತು. ಅಂದಿನಿಂದ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿ ಬಾರ್ಡರ್- ಗವಾಸ್ಕರ್ ಟ್ರೋಫಿ ಎಂದು ಕರೆಯಲ್ಪಡುತ್ತದೆ.
ಮೊದಲ ಮುಖಾಮುಖಿ
ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ನಡೆದಿದ್ದು 1996 ಅಕ್ಟೋಬರ್ನಲ್ಲಿ. ದೆಹಲಿಯ ಫಿರೋಜ್ ಶಾ ಕೋಟ್ಲಾ(ಈಗ ಅರುಣ್ ಜೇಟ್ಲಿ ಸ್ಟೇಡಿಯಂ) ಮೈದಾನದಲ್ಲಿ. ಆ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. 1997-98ರಲ್ಲಿ ಆಸ್ಟ್ರೇಲಿಯಾ ಮತ್ತೆ ಭಾರತ ಪ್ರವಾಸ ಮಾಡಿತ್ತು. ಆ ಸರಣಿಯನ್ನು ಭಾರತ 2-1 ಅಂತರದಿಂದ ಗೆಲುವು ಸಾಧಿಸಿತ್ತು.
1999-2000 ರಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ತಂಡ ಬಾರ್ಡರ್-ಗವಾಸ್ಕರ್ ಸರಣಿಯನ್ನಾಡಲು ಮೊದಲ ಬಾರಿಗೆ ಆಸೀಸ್ ಗೆ ತೆರಳಿತ್ತು. ಆದರೆ ಸರಣಿಯಲ್ಲಿ ಕಾಂಗರೂಗಳು ಭಾರತದ ಮೇಲೆ ಸವಾರಿ ನಡೆಸಿದ್ದರು. ನಡೆದ ಮೂರು ಪಂದ್ಯಗಳಲ್ಲಿ ಆಸೀಸ್ ಗೆದ್ದು ಬೀಗಿತ್ತು.
ತವರಿನಲ್ಲಿ ಸರಣಿ ಗೆದ್ದಿದ್ದ ಅಸ್ಟ್ರೇಲಿಯಾ ಮರು ವರ್ಷ ಅಂದರೆ, 2001ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿತು. ಇಲ್ಲಿ ಸೌರವ್ ಗಂಗೂಲಿ ಪಡೆ ಆಸೀಸ್ಗೆ 2-1 ಅಂತರದಿಂದ ಸೋಲಿನ ರುಚಿ ತೋರಿಸಿತ್ತು. ಹರ್ಭಜನ್ ಸಿಂಗ್ ಹ್ಯಾಟ್ರಿಕ್, ವಿವಿಎಸ್ ಲಕ್ಷ್ಮಣ್ 281 ರನ್, ದ್ರಾವಿಡ್ – ಲಕ್ಷ್ಮಣ್ ದಾಖಲೆಯ ಜತೆಯಾಟ ಈ ಸರಣಿಯ ಹೈಲೆಟ್ಸ್ ಆಗಿತ್ತು. ಐತಿಹಾಸಿಕ ಕೋಲ್ಕತ್ತಾ ಟೆಸ್ಟ್ ಪಂದ್ಯ ನಡೆದಿದ್ದು ಕೂಡ ಇದೇ ಸರಣಿಯಲ್ಲಿ. 2004ರಲ್ಲಿ ಭಾರತಕ್ಕೆ ಆಗಮಿಸಿದ ಆಸ್ಟ್ರೇಲಿಯಾ ತಂಡ ಸರಣಿಯನ್ನು 2-1 ಅಂತರದಿಂದ ಗೆದ್ದು 1969-70ರ ಬಳಿಕ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಜಯಿಸಿದ ಐತಿಹಾಸಿಕ ಸಾಧನೆ ಮಾಡಿತ್ತು.
ಕಾಂಗರೂಗಳ ಕರಾಳ ಮುಖ ಜಗತ್ತಿಗೆ ಪರಿಚಯ
2007-08ರಲ್ಲಿ ಆಸೀಸ್ ನೆಲದಲ್ಲಿ ನಡೆದ ಸರಣಿ ಕಾಂಗರೂಗಳ ಕೆಟ್ಟ ಮುಖವನ್ನು ಜಗತ್ತಿಗೆ ಪರಿಚಯಿಸಿತ್ತು. ಕೆಟ್ಟ ಅಂಪಾಯರಿಂಗ್ ನಿರ್ಧಾರಗಳು, ಸೈಮಂಡ್ಸ್- ಹರ್ಭಜನ್ ನಡುವಿನ ಮಂಕಿಗೇಟ್ ಪ್ರಕರಣಗಳು ಭಾರೀ ಸದ್ದು ಮಾಡಿದ್ದವು. ಪ್ರವಾಸಿಗರನ್ನು ಮಾನಸಿಕವಾಗಿ ಕುಗ್ಗಿಸಿದ್ದ ಆಸೀಸ್ ಆಟಗಾರರು ಸರಣಿ ಜಯಿಸಿದ್ದರು.
2010ರಲ್ಲಿ ಎರಡು ಪಂದ್ಯಗಳ ಸರಣಿಗಾಗಿ ಆಸ್ಟ್ರೇಲಿಯಾ ಭಾರತಕ್ಕೆ ಆಗಮಿಸಿತ್ತು. ಆಗ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ನಾಯಕನಾಗಿದ್ದರು. ಸರಣಿಯನ್ನು ಭಾರತ 2-0 ಅಂತರದ ಜಯ ಸಾಧಿಸಿತ್ತು. 2011-12ರ ಸರಣಿಯಲ್ಲಿ ಧೋನಿ ಪಡೆ ವೈಟ್ ವಾಷ್ ಅವಮಾನ ಅನುಭವಿಸಿತು. ಆದರೆ 2013ರ ಸರಣಿಯಲ್ಲಿ ಸೇಡು ತೀರಿಸಿಕೊಂಡ ಭಾರತ ತಂಡ 4-0 ಅಂತರದಲ್ಲಿ ಸರಣಿ ಗೆಲುವು ಸಾಧಿಸಿತು.
ಧೋನಿ ವಿದಾಯ
2014ರಲ್ಲಿ ಭಾರತ ತಂಡ ಆಸೀಸ್ ಪ್ರವಾಸ ಕೈಗೊಂಡಿತ್ತು. ಇಲ್ಲಿ ಭಾರತ 2-0 ಅಂತರದ ಸೋಲನುಭವಿಸಿತು. ಇದೇ ಸರಣಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು. ವಿರಾಟ್ ಕೊಹ್ಲಿ ಭಾರತದ ಹೊಸ ನಾಯಕನಾಗಿ ಆಯ್ಕೆಯಾದರು.
ಭಾರತಕ್ಕೆ ಐತಿಹಾಸಿಕ ಗೆಲುವು
ವಿರಾಟ್ ಕೊಹ್ಲಿ ಸಾರಥ್ಯದ ಯಂಗ್ ಟೀಮ್ ಇಂಡಿಯಾ 2018-19ರಲ್ಲಿ ಆಸೀಸ್ ಪ್ರವಾಸ ಕೈಗೊಂಡಿತು. ರವಿ ಶಾಸ್ರ್ತಿ ಭಾರತ ತಂಡದ ಕೋಚ್ ಆಗಿದ್ದರು. ಸರಣಿಯನ್ನು 2-1 ಅಂತರದಿಂದ ಭಾರತ ಗೆದ್ದು ಬೀಗಿತು. ಇದು ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಗೆದ್ದ ಮೊದಲ ಟೆಸ್ಟ್ ಸರಣಿ ಗೆಲುವು. ಈ ಐತಿಹಾಸಿಕ ಸಾಧನೆ ಮಾಡಿದ ಕೀರ್ತಿ ಕೊಹ್ಲಿಗೆ ಸಲ್ಲುತ್ತದೆ. ಕೆಣಕಿದ ಆಸೀಸ್ ಆಟಗಾರರಿಗೆ ಪ್ರತಿಯಾಗಿ ಕೆಣಕಿ ಆಸೀಸ್ ಪಡೆಗೆ ತವರಿನಲ್ಲಿಯೇ ಸೋಲಿನ ರುಚಿ ತೋರಿಸಿದರು. ಚೇತೇಶ್ವರ ಪೂಜಾರ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಪಂತ್ ಪರಾಕ್ರಮ
2021ರಲ್ಲಿ ಭಾರತ ತಂಡ ಮತ್ತೆ ಆಸೀಸ್ಗೆ ಪ್ರವಾಸ ಕೈಗೊಂಡಿತು. ಆದರೆ ಸರಣಿ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತು ಮಾಜಿ ಆಟಗಾರರು ಭಾರತ ತಂಡಕ್ಕೆ ಸಾಮರ್ಥ್ಯದ ಸವಾಲೊಡ್ಡಿದರು. 2018-19ರಲ್ಲಿ ಭಾರತೀಯರು ಸರಣಿ ಗೆದ್ದಿರುವ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸೇವೆಯನ್ನು ಕಳೆದುಕೊಂಡ ಕಾರಣ ಎಂದು ಹೇಳಿತ್ತು. ಉಭಯ ಆಟಗಾರರು ಆಗ ಸ್ಯಾಂಡ್ ಪೇಪರ್ ಗೇಟ್ ವಿವಾದಿಂದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.
ಅಡಿಲೇಡ್ನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ಕೇವಲ 36 ರನ್ಗೆ ಸರ್ವಪತನ ಕಂಡು ಭಾರೀ ಸೋಲು ಕಂಡಿತ್ತು. ಇದು ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿತ್ತು. ಭಾರತ ತಂಡದ ಈ ಸೋಲಿಗೆ ಭಾರತೀಯರಿಂದಲೇ ಭಾರೀ ಟೀಕೆ ಕೇಳಿ ಬಂದಿತ್ತು. ನಾಯಕನಾಗಿದ್ದ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದರು. ಹೀಗಾಗಿ ಉಳಿದ ಪಂದ್ಯಕ್ಕೆ ಅಜಿಂಕ್ಯ ರಹಾನೆ ನಾಯಕತ್ವ ವಹಿಸಿಕೊಂಡರು.
ಇದನ್ನೂ ಓದಿ Cameron Green: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಗ್ರೀನ್ ಹೊರಕ್ಕೆ
ಒಂದೆಡೆ ಸೋಲು, ಮತ್ತೊಂದೆಡೆ ಅನುಭವಿ ವಿರಾಟ್ ಕೊಹ್ಲಿ ಸೇವೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಹಂಗಾಮಿ ನಾಯಕ ರಹಾನೆ ದ್ವಿತೀಯ ಪಂದ್ಯದಲ್ಲಿ ಶತಕ ಬಾರಿಸಿ ಪಂದ್ಯವನ್ನು ಗೆಲ್ಲಿಸಿ ಕುಸಿದ್ದ ಆಟಗಾರರ ಆತ್ಮವಿಶ್ವಾಸವನ್ನು ಮತ್ತೆ ಬಡಿದೆಬ್ಬಿಸಿದರು. ನಂತರ ನಡೆದದ್ದು ಇತಿಹಾಸ. ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿತು.
ಅತ್ಯಂತ ರೋಚಕವಾಗಿ ಗಬ್ಬಾ ಅಂಗಳದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಂಥಾಹ್ವಾನವನ್ನು ಸ್ವೀಕರಿಸಿ ಬಂದಿದ್ದ ರಿಷಭ್ ಪಂತ್ ಎಂದಿನ ಬಿರುಸಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತ ಸಾಗಿ ಕಾಂಗರೂಗಳಿಗೆ ಸೋಲಿನ ರುಚಿ ತೋರಿಸಿದ್ದರು. ಅಂತಿಮವಾಗಿ ಜೋಶ್ ಹ್ಯಾಝಲ್ವುಡ್ ಎಸೆತವನ್ನು ಲಾಂಗ್ ಆಫ್ ಬೌಂಡರಿಗೆ ಬಡಿದಟ್ಟುವುದರೊಂದಿಗೆ ನೂತನ ಇತಿಹಾಸವೊಂದು ನಿರ್ಮಾಣಗೊಂಡಿತ್ತು. 32 ವರ್ಷಗಳಿಂದ ಬ್ರಿಸ್ಬೇನ್ನಲ್ಲಿ ಸೋಲನ್ನೇ ಕಾಣದ ಆಸ್ಟ್ರೇಲಿಯಾ ಈ ಅನಿರೀಕ್ಷಿತ ಆಘಾತಕ್ಕೆ ತತ್ತರಿಸಿ ಬಿಕ್ಕಳಿಸಿತ್ತು.!
ಕೀಪರ್ ರಿಷಭ್ ಪಂತ್ ಆರಂಭಿಕ ಆಟಗಾರ ಶುಭಮನ್ ಗಿಲ್ ಭಾರತದ ಗೆಲುವಿನ ಹೀರೋಗಳಾಗಿ ಮೂಡಿಬಂದಿದ್ದರು. ಇವರ ಸಾಹಸಗಾಥೆ ದೇಶದ ಮುಂದಿನ ಪೀಳಿಗೆಯ ಯಶಸ್ವಿ ಕ್ರಿಕೆಟ್ ಅಧ್ಯಾಯಕ್ಕೆ ಸೊಗಸಾದ ಮುನ್ನುಡಿಯೊಂದನ್ನು ಬರೆಯಿತು. ದೇಶದ ಕ್ರಿಕೆಟ್ ಭವಿಷ್ಯ ಇಂಥ ಯುವ ಆಟಗಾರರ ಕೈಯಲ್ಲಿ ಭದ್ರವಾಗಿದೆ ಎಂಬುದು ಈ ಪ್ರವಾಸದಲ್ಲಿ ಸಾಬೀತಾಗಿತ್ತು. ಸೋಲಿನ ಬಳಿಕ ಆಸೀಸ್ ತಂಡದ ಕೋಚ್ ಜಸ್ಟೀನ್ ಲ್ಯಾಂಗರ್ ಯಾವುದೇ ಕಾರಣಕ್ಕೂ ಭಾರತೀಯರನ್ನು ಹಗುರವಾಗಿ ಕಾಣಬಾರದರು ಎನ್ನುವುದು ನನಗೆ ಈಗ ಅರ್ಥವಾಯಿತು ಎಂದು ಬಹಿರಂಗವಾಗಿಯೇ ಹೇಳಿದ್ದರು.
2022-23ರಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಆಸ್ಟ್ರೇಲಿಯಾಕ್ಕೆ ರೋಹಿತ್ ಶರ್ಮಾ ಪಡೆದ 4-1 ಅಂತರದಿಂದ ಸೋಲಿನ ರುಚಿ ತೋರಿಸಿತ್ತು. ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದ ಸ್ಪಿನ್ ಆಲ್ರೌಂಡರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಜಂಟಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.