Friday, 8th November 2024

Border-Gavaskar Trophy: ಭಾರತ ಟೆಸ್ಟ್‌ ತಂಡಕ್ಕೆ ಚೇತೇಶ್ವರ್‌ ಪೂಜಾರ ಮರಳಬೇಕೆಂದ ರಾಬಿನ್‌ ಉತ್ತಪ್ಪ!

Robin Uthappa wants Cheteshwar Pujara back in Test team for Australia tour

ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (Border-Gavaskar Trophy) ಟೆಸ್ಟ್‌ ಸರಣಿಯ ಭಾರತ ತಂಡಕ್ಕೆ ಹಿರಿಯ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ಮರಳಬೇಕೆಂದು ಟೀಮ್‌ ಇಂಡಿಯಾ ಮಾಜಿ ಓಪನರ್‌ ಹಾಗೂ ಕನ್ನಡಿಗ ರಾಬಿನ್‌ ಉತ್ತಪ್ಪ ಆಗ್ರಹಿಸಿದ್ದಾರೆ. 2023ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ಚೇತೇಶ್ವರ್‌ ಪೂಜಾರ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಅಂದಿನಿಂದ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗುತ್ತಿದೆ.

ಚೇತೇಶ್ವರ್‌ ಪೂಜಾರರನ್ನು ಟೆಸ್ಟ್‌ ತಂಡದಿಂದ ಕೈ ಬಿಟ್ಟ ಬಳಿಕ ಅವರ ಬದಲು ಮೂರನೇ ಕ್ರಮಾಂಕದಲ್ಲಿ ಶುಭಮನ್‌ ಗಿಲ್‌ ಅವರನ್ನು ಆಡಿಸಲಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್‌ ಸರಣಿಯ ಭಾರತ ತಂಡದ ಬಗ್ಗೆ ಪ್ರತಿಕ್ರಿಯಿಸಿದ ರಾಬಿನ್‌ ಉತ್ತಪ್ಪ, ತಂಡಕ್ಕೆ ರಕ್ಷಣಾತ್ಮಕ ಬ್ಯಾಟ್ಸ್‌ಮನ್‌ನ ಅಗತ್ಯವಿದೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ಅನುಭವ ಹೊಂದಿರುವ ಯಾವುದೇ ಬ್ಯಾಟ್ಸ್‌ಮನ್‌ ಸದ್ಯ ಭಾರತ ತಂಡದಲ್ಲಿ ಇಲ್ಲ ಎಂಬುದು ಉತ್ತಪ್ಪ ವಾದವಾಗಿದೆ.

ಭಾರತ ಟೆಸ್ಟ್‌ ತಂಡಕ್ಕೆ ಚೇತೇಶ್ವರ್‌ ಪೂಜಾರ ಅಗತ್ಯವಿದೆ: ಉತ್ತಪ್ಪ

ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ ರಾಬಿನ್‌ ಉತ್ತಪ್ಪ, “ಸಾಂಪ್ರದಾಯಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ರಕ್ಷಣಾತ್ಮಕ ಬ್ಯಾಟ್ಸ್‌ಮನ್‌ನ ಅಗತ್ಯವಿದೆ. ಕೆಎಲ್‌ ರಾಹುಲ್‌ ಮತ್ತು ಅಭಿಮನ್ಯು ಈಶ್ವರನ್‌ ಅವರು ಈ ಪಾತ್ರವನ್ನು ನಿರ್ವಹಿಸಬಲ್ಲರು. ಆದರೆ, ಚೇತೇಶ್ವರ್‌ ಪೂಜಾರ ಅವರಂಥ ರಕ್ಷಣಾತ್ಮಕ ಬ್ಯಾಟ್ಸ್‌ಮನ್‌ನ ಅಗತ್ಯವಿದೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ,” ಎಂದು ಹೇಳಿದ್ದಾರೆ.

“ಭಾರತ ತಂಡದಲ್ಲಿರುವ ಯಾವೊಬ್ಬ ಆಟಗಾರ ಈ ಪಾತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ. ಶುಭಮನ್‌ ಗಿಲ್‌ ಅವರ ರೀತಿ ಪ್ರತಿಯೊಬ್ಬ ಆಟಗಾರನೂ ಸಕಾರಾತ್ಮಕವಾಗಿ, ಆಕ್ರಮಣಕಾರಿಯಾಗಿ ಹಾಗೂ ತ್ವರಿತವಾಗಿ ರನ್‌ ಗಳಿಸಲು ಬಯಸುತ್ತಾರೆ. ಶುಭಮನ್‌ ಗಿಲ್‌ ಅವರ ಸ್ವಾಭವಿಕ ಆಟ ಇದಾಗಿದೆ. ಆದರೆ, ಇವರನ್ನು ನೀವು ದೀರ್ಘಾವಧಿ ರಕ್ಷಣಾತ್ಮಕವಾಗಿ ಬ್ಯಾಟ್‌ ಮಾಡಿ ಎಂದರೆ ಆಗುವುದಿಲ್ಲ. ಏಕೆಂದರೆ ಈ ಶೈಲಿಯ ಆಟವನ್ನು ಅವರು ಆನಂದಿಸುವುದಿಲ್ಲ,” ಎಂದು ಉತ್ತಪ್ಪ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಎ ವಿರುದ್ಧದ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಋತುರಾಜ್‌ ಗಾಯಕ್ವಾಡ್‌, ಅಭಿಮನ್ಯು ಈಶ್ವರನ್‌ ಹಾಗೂ ಕೆಎಲ್‌ ರಾಹುಲ್‌ ಅವರು ಅತ್ಯಂತ ಹೀನಾಯವಾಗಿ ವಿಕೆಟ್‌ ಒಪ್ಪಿಸಿದ್ದಾರೆ. ಆದರೆ, ಧ್ರುವ್‌ ಜುರೆಲ್‌ ಮತ್ತು ಸಾಯ್‌ ಸುದರ್ಶನ್‌ ಅವರು ಆಸೀಸ್‌ ಕಂಡೀಷನ್ಸ್‌ನಲ್ಲಿ ಉತ್ತಮ ಪ್ರತಿರೋಧ ತೋರಿದ್ದಾರೆ. ಆದರೂ ರಾಬಿನ್‌ ಉತ್ತಪ್ಪ ಅವರು, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಅನುಭವಿ ಬ್ಯಾಟ್ಸ್‌ಮನ್‌ ಅಗತ್ಯವಿದೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೆ ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಜಸ್‌ಪ್ರೀತ್‌ ಬುಮ್ರಾ (ಉಪ ನಾಯಕ), ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಸರ್ಫರಾಝ್‌ ಖಾನ್‌, ಧ್ರುವ್‌ ಜುರೆಲ್‌ (ವಿಕೆಟ್‌ ಕೀಪರ್‌), ಆರ್‌ ಅಶ್ವಿನ್‌, ರವೀಂದ್ರ ಜಡೇಜಾ, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಪ್ರಸಿಧ್‌ ಕೃಷ್ಣ, ಹರ್ಷಿತ್‌ ರಾಣಾ, ನಿತೀಶ್‌ ಕುಮಾರ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌

ಮೀಸಲು ಆಟಗಾರರು: ಮುಖೇಶ್‌ ಕುಮಾರ್‌, ನವದೀಪ್‌ ಸೈನಿ, ಖಲೀಲ್‌ ಅಹ್ಮದ್‌

ಈ ಸುದ್ದಿಯನ್ನು ಓದಿ: IPL 2025 – ಚೆನ್ನೈನಲ್ಲಿ ರಚಿನ್‌ ರವೀಂದ್ರ ಅಭ್ಯಾಸ: ಚೆನ್ನೈ ಫ್ರಾಂಚೈಸಿ ವಿರುದ್ದ ಉತ್ತಪ್ಪ ಗುಡುಗು!