Wednesday, 13th November 2024

ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿದ ಬಾಕ್ಸರ್ ಸತೀಶ್ ಕುಮಾರ್

ಟೋಕಿಯೊ: ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯಾಗಿದ್ದ ಬಾಕ್ಸರ್ ಸತೀಶ್ ಕುಮಾರ್, ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ. ಈ ಮೂಲಕ ಕಂಚಿನ ಪದಕ ಗೆಲ್ಲುವ ಆಸೆ ನುಚ್ಚುನೂರಾಗಿದೆ.

ಭಾನುವಾರದ ಪುರುಷರ ಸೂಪರ್ ಹೆವಿವೇಟ್ (91+ ಕೆ.ಜಿ.) ವಿಭಾಗದಲ್ಲಿ ಸತೀಶ್ ಕುಮಾರ್, ವಿಶ್ವ ನಂ.1 ರ‍್ಯಾಂಕ್‌ನ ಉಜ್ಬೇಕಿಸ್ತಾನದ ಬಖೋದಿರ್ ಜಲೋಲೋವ್ ವಿರುದ್ಧ 0-5ರಲ್ಲಿ ಸೋಲು ಅನುಭವಿಸಿದರು. ಸತೀಶ್ ಕುಮಾರ್ ದಿಟ್ಟ ಹೋರಾಟವನ್ನು ಪ್ರದರ್ಶಿಸಿದರೂ ಅಗ್ರ ಶ್ರೇಯಾಂಕಿತ ಬಾಕ್ಸರ್ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.

ಭಾರತದ ಹೆವಿವೇಟ್ ಬಾಕ್ಸರ್ ಸತೀಶ್ ಕುಮಾರ್ ಅವರಿಗೆ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ತಲೆಗೆ ತೀವ್ರ ಗಾಯವಾಗಿ ಹೊಲಿಗೆ ಹಾಕಲಾಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾಗವಹಿಸುವುದು ಅನುಮಾನ ವಾಗಿತ್ತು. ಆದರೆ ವೈದ್ಯರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಭಾಗವಹಿ ಸುವ ನಿರ್ಧಾರ ಕೈಗೊಂಡರು.

ಕನಿಷ್ಠ ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಿದ್ದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶವಿತ್ತು. ಕಳೆದ ದಿನ ಪೂಜಾ ರಾಣಿ ಸಹ ಅಂತಿಮ ಎಂಟರ ಘಟ್ಟದಲ್ಲಿ ಎಡವಿದ್ದರು.

ಮಹಿಳೆಯರ 69 ಕೆ.ಜಿ. ವಿಭಾಗದಲ್ಲಿ ಲವ್ಲಿನಾ ಬೋರ್ಗೊಹೈನ್ ಸೆಮಿಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ.