Wednesday, 20th November 2024

Cameron Green: ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌  ಸರಣಿಯಿಂದ ಗ್ರೀನ್‌ ಹೊರಕ್ಕೆ

ಮೆಲ್ಬರ್ನ್: ವರ್ಷಾಂತ್ಯದಲ್ಲಿ ನಡೆಯುವ ಬಹುನಿರೀಕ್ಷಿತ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಬಾರ್ಡರ್‌-ಗವಾಸ್ಕರ್‌(Border Gavaskar Trophy) ಟೆಸ್ಟ್‌ ಸರಣಿಗೆ ಈ ಬಾರಿ ಸ್ಟಾರ್‌ ಆಟಗಾರರ ಅಲಭ್ಯ ಕಾಡಲಿದೆ. ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಸರಣಿ ಆಡುವುದು ಅನುಮಾನ ಎನ್ನುವಾಗಲೇ ಆಸೀಸ್‌ ತಂಡದ ಪ್ರಮುಖ ಆಲ್‌ ರೌಂಡರ್‌ ಕ್ಯಾಮರಾನ್‌ ಗ್ರೀನ್‌(Cameron Green) ಕೂಡ ಸರಣಿಯಿಂದ ಬಹುತೇಕ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

ಬೆನ್ನು ನೋವಿಗೆ ತುತ್ತಾಗಿರುವ ಗ್ರೀನ್‌ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದ್ದು, ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ. ಇತ್ತೀಚೆಗೆ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಆಸ್ಟ್ರೇಲಿಯ ತಂಡ ಅಲ್ಲಿ 5 ಪಂದ್ಯಗಳ ಏಕ ದಿನ ಸರಣಿಯನ್ನಾಡಿತ್ತು. ಈ ವೇಳೆ ಗ್ರೀನ್‌ ಬೆನ್ನು ನೋವಿಗೆ ಈಡಾಗಿದ್ದರು ಎನ್ನಲಾಗಿದೆ.

ರೋಹಿತ್‌ ಶರ್ಮಾ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಬಿಸಿಸಿಐಗೆ ಈ ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಬಹುಶಃ ಈ ಕಾರಣದಿಂದ ರೋಹಿತ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ IND vs BAN : ಭಾರತಕ್ಕೆ86 ರನ್‌ಗಳ ಭರ್ಜರಿ ಜಯ; ಟಿ20 ಸರಣಿ ಕೈವಶ

ನವೆಂಬರ್ 22ರಿಂದ ಜನವರಿ 7ರವರೆಗೆ ಐದು ಪಂದ್ಯಗಳು ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿದೆ. ಇದರಲ್ಲಿ ಅಡಿಲೇಡ್ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಆಗಿರಲಿದೆ.

1991/92 ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತವು ಬಾರ್ಡರ್-ಗಾವಸ್ಕರ್ ಟ್ರೋಫಿಯ ಭಾಗವಾಗಿ ಐದು ಪಂದ್ಯಗಳ ಸರಣಿಯನ್ನು ಆಡಲಿದೆ. ಇದು ಮುಂದಿನ ವರ್ಷದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಎರಡೂ ತಂಡಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಭಾರತವು ಇತ್ತೀಚಿನ ಕೆಲ ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಲೇ ಬಂದಿದೆ. ಕಳೆದ 4 ಸರಣಿಗಳಲ್ಲಿ ಭಾರತವೇ ಗೆದ್ದು ಬಂದಿದೆ. 2016-17ರಲ್ಲಿ 2-1 (ತವರಿನ ಸರಣಿ), 2018-19ರಲ್ಲಿ 2-1 (ಆಸ್ಟ್ರೇಲಿಯದಲ್ಲಿ), 2020- 21ರಲ್ಲಿ 2-1 (ಆಸ್ಟ್ರೇಲಿಯದಲ್ಲಿ) ಹಾಗೂ 2022-23ರಲ್ಲಿ 2-1 (ತವರಿನ ಸರಣಿ) ಅಂತರದಿಂದ ಭಾರತ ಜಯ ಸಾಧಿಸಿತ್ತು. ಆದಾಗ್ಯೂ, 2023ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ತಂಡವು ಭಾರತವನ್ನು ಸೋಲಿಸಿತ್ತು.