ಸಿಡ್ನಿ: ಪ್ರವಾಸಿ ಭಾರತ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 312 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಭಾರತದ ಗೆಲುವಿಗೆ 407 ರನ್ ಗಳ ಕಠಿಣ ಗುರಿ ನೀಡಿದೆ.
ಈಗಾಗಲೇ ಆರಂಭಿಕರನ್ನು ಕಳೆದುಕೊಂಡಿರುವ ಭಾರತಕ್ಕೆ ಐದನೇ ದಿನದ ಮೊದಲಾರ್ಧ ಆಟ ಬಹು ಪ್ರಮುಖವಾಗಿದೆ. ವಿಕೆಟ್ ಉಳಿಸಿಕೊಂಡು ಇನ್ನಿಂಗ್ಸ್ ಬೆಳೆಸುವುದು ಟೀಂ ಇಂಡಿಯಾಗಿರುವ ಬಹುದೊಡ್ಡ ಸವಾಲು.
ನಾಲ್ಕನೇ ದಿನದ ಅಂತ್ಯಕ್ಕೆ ಭಾರತ ಆರಂಭಿಕರಿಬ್ಬರನ್ನು ಕಳೆದುಕೊಂಡು 98 ರನ್ ಗಳಿಸಿದೆ. ಆರಂಭಿಕ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಮೊದಲ ಜತೆಯಾಟಕ್ಕೆ 71 ಪೇರಿಸಿತು. ಈ ಸಂದರ್ಭದಲ್ಲಿ ಗಿಲ್, ಹ್ಯಾಜಲ್‌ವುಡ್ ಬೌಲಿಂಗಿನಲ್ಲಿ ಕೀಪರ್ ಪೇನ್‌ಗೆ ಕ್ಯಾಚ್ ನೀಡಿದರು. ಬಳಿಕ ಉಪನಾಯಕ ರೋಹಿತ್ ಶರ್ಮಾ, ತಮ್ಮ ಅರ್ಧಶತಕ ಪೂರೈಸಿದ ನಂತರ, ಅನಾವಶ್ಯಕ ಹೊಡೆತಕ್ಕೆ ಕೈ ಹಾಕಿ, ಪೆವಿಲಿಯನ್ ಪರೇಡ್ ನಡೆಸಿದರು. ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ ಹಾಗೂ ಉಪನಾಯಕ ಪ್ಯಾಟ್ ಕಮ್ಮಿನ್ಸ್ ತಲಾ ಒಂದು ವಿಕೆಟ್ ಕಬಳಿಸಿದರು.
ನಾಲ್ಕನೇ ದಿನದ ಆರಂಭದಲ್ಲಿ ಆಸೀಸ್ ಆಟಗಾರ ಸ್ಟೀವನ್ ಸ್ಮಿತ್ (81) ಮತ್ತು ಮರ್ನಸ್ ಲ್ಯಾಬುಶೆನ್ (73) ಮತ್ತು ಗ್ರೀನ್ (84) ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತು. ಟಿಮ್ ಪೈನ್ (ನಾಟೌಟ್ 39) ಗಳಿಸಿ ಕ್ರೀಸ್‌ನಲ್ಲಿದ್ದರು. ಗ್ರೀನ್ ವಿಕೆಟ್ ಪತನದೊಂದಿಗೆ ಆಸ್ಟ್ರೇಲಿಯಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಭಾರತದ ಪರ ಅಶ್ವಿನ್ (95ಕ್ಕೆ 2) ಮತ್ತು ನವದೀಪ್ ಸೈನಿ (54ಕ್ಕೆ 2) ಯಶಸ್ವಿ ಬೌಲರ್‌ಗಳೆನಿಸಿದರು. ಮುಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ತಲಾ ಒಂದು ವಿಕೆಟ್ ಕಿತ್ತರು.