Thursday, 19th September 2024

Champions Trophy 2025: ಭದ್ರತೆ ಪರಿಶೀಲನೆಗೆ ಪಾಕ್‌ಗೆ ಭೇಟಿ ಕೊಟ್ಟ ಐಸಿಸಿ; ಲಾಹೋರ್‌ನಲ್ಲಿ ಭಾರತದ ಪಂದ್ಯ!

ಕರಾಚಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿ(Champions Trophy 2025) ಕ್ರಿಕೆಟ್‌ ಟೂರ್ನಿ ಬಹುತೇಕ ಪಾಕ್‌ ನೆಲದಲ್ಲಿ ನಡೆಯುವುದು ಖಚಿತವಾದಂತಿದೆ. ಭದ್ರತೆ ಸಹಿತ ಇತರ ವ್ಯವಸ್ಥೆಗಳ ಪರಿಶೀಲನೆಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಐವರು ಸದಸ್ಯರ ನಿಯೋಗವು ಕರಾಚಿಗೆ ಭೇಟಿ ನೀಡಿದೆ. ಕೆಲ ದಿನಗಳ ಹಿಂದೆ ಐಸಿಸಿ ಚೀಫ್ ಎಕ್ಸಿಕ್ಯೂಟಿವ್ ಜೆಫ್ ಅಲ್ಲಾರ್ಡೈಸ್(Geoff Allardice) ಅವರು ಸದ್ಯದ ಮಟ್ಟಿಗೆ ಚಾಂಪಿಯನ್ಸ್‌ ಟ್ರೋಫಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲಎಂದು ಹೇಳಿದ್ದರು. ಇದೀಗ ಭದ್ರತಾ ಪರಿಶೀಲನೆಗೆ ಐಸಿಸಿ ಅಧಿಕಾರಿಗಳು ಪಾಕ್‌ಗೆ ಭೇಟಿ ನೀಡಿದ್ದು ನೋಡುವಾಗ ಪಾಕ್‌ನಲ್ಲಿಯೇ ಪಂದ್ಯ ನಡೆಯುವ ಸಾಧ್ಯತೆ ಕಂಡುಬಂದಿದೆ.

ತಾತ್ಕಾಲಿಕ ವೇಳಾಪಟ್ಟಿ ಕುರಿತು ಚರ್ಚೆ

ಐಸಿಸಿ ನಿಯೋಗವು ಕೆಲವು ತಿಂಗಳ ಹಿಂದೆ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ ಸಿದ್ಧಪಡಿಸಿ ಕಳುಹಿಸಿದ್ದ ಪಂದ್ಯಾವಳಿಯ ತಾತ್ಕಾಲಿಕ ವೇಳಾಪಟ್ಟಿ ಕುರಿತು ಚರ್ಚೆ ನಡೆಸಲಿದೆ. ಟೂರ್ನಿಯನ್ನು ಹೈಬ್ರೀಡ್‌ ಮಾದರಿಯಲ್ಲಿ ನಡೆಸಿ ಎಂದು ಹೇಳಿದ್ದ ಭಾರತ ತಂಡ ಕೂಡ ಪಾಕ್‌ನಲ್ಲಿಯೇ ಪಂದ್ಯವನ್ನಾಡುವ ಸಾಧ್ಯತೆ ಕಂಡುಬಂದಿದೆ. ಭಾರತದ ಎಲ್ಲ ಪಂದ್ಯಗಳನ್ನು ಲಾಹೋರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಒಂದು ವೇಳೆ ಭಾರತ ಸರಕಾರ ಭಾರತೀಯ ತಂಡವನ್ನು ಪಾಕ್‌ಗೆ ಕಳುಹಿಸಲು ಅವಕಾಶ ನೀಡದಿದ್ದರೆ ಏನು ಮಾಡಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆಯಲಿದೆ. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಭಾರತ ಮತ್ತು ಪಾಕ್‌ ಪಂದ್ಯ ಮಾರ್ಚ್​ 1ರಂದು ಲಾಹೋರ್​ನಲ್ಲಿ(Champions Trophy IND vs PAK)​ ಪಂದ್ಯ ನಡೆಯಬೇಕಿದೆ. 

ಇದನ್ನೂ ಓದಿ IND vs BAN: ಮೊದಲ ಟೆಸ್ಟ್‌ಗೆ ಭಾರತದ ತ್ರಿವಳಿ ಸ್ಪಿನ್‌ ಅಸ್ತ್ರ

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.

ಕಳೆದ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಪಾಕ್​ಗೆ ಹೋಗಲು ಒಪ್ಪದ ಕಾರಣ ಹೈಬ್ರೀಡ್​ ಮಾದರಿಯಲ್ಲಿ ಪಾಕ್​ ಮತ್ತು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.