Thursday, 12th December 2024

Champions Trophy 2025: ಬಿಸಿಸಿಐಗೆ ಹೊಸ ಆಫರ್‌ ನೀಡಿದ ಪಾಕಿಸ್ತಾನ

ಕರಾಚಿ: ಭಾರತ (India) ಹಾಗೂ ಪಾಕಿಸ್ತಾನ (Pakistan)ನಡುವಿನ ರಾಜತಾಂತ್ರಿಕ ವಿಚಾರವಾಗಿ ಮುಂದಿನ ವರ್ಷ ಪಾಕ್‌ ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್​ ಟ್ರೋಫಿ(Champions Trophy 2025) ಒಂದಲ್ಲ ಒಂದು ವಿಚಾರದಲ್ಲಿ ಸದ್ದು ಮಾಡುತ್ತಲೇ ಇದೆ.​ ಹಾಲಿ ರನ್ನರ್​ ಅಪ್​ ಭಾರತ ಭದ್ರತೆಯ ಕಾರಣ ನೀಡಿ ಪಾಕ್​ ನೆಲದಲ್ಲಿ ಯಾವುದೇ ಕಾರಣಕ್ಕೂ ಆಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಆದರೆ, ಟೂರ್ನಿಯನ್ನು ತನ್ನ ನೆಲದಲ್ಲೇ ನಡೆಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಇದೀಗ ಬಿಸಿಸಿಐ(BCCI) ಮುಂದೆ ಹೊಸ ಪ್ರಸ್ತಾಪವೊಂದನ್ನು ಇರಿಸಿದೆ ಎಂದು ತಿಳಿದುಬಂದಿದೆ.

ಭದ್ರತೆಯ ಕಾರಣದಿಂದ ಪಾಕ್‌ಗೆ ಬರಲು ಹಿಂದೇಟು ಹಾಕುತ್ತಿರುವ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿ ವೇಳೆ ಪಾಕ್‌ನಲ್ಲಿ ಉಳಿಯಲು ಇಚ್ಛಿಸದಿದ್ದರೆ, ಪಂದ್ಯದ ದಿನ ನವದೆಹಲಿ ಅಥವಾ ಚಂಡೀಗಢದಿಂದ ಲಾಹೋರ್‌ಗೆ ಬಂದು, ಪಂದ್ಯ ಮುಗಿದ ಬಳಿಕ ತವರಿಗೆ ವಾಪಾಸಾಗಲಿ ಎನ್ನುವ ಪ್ರಸ್ತಾಪವನ್ನು ಪಾಕ್‌ ಕ್ರಿಕೆಟ್‌ ಮಂಡಳಿ ಬಿಸಿಸಿಐ ಮುಂದಿಟ್ಟಿರುವುದಾಗಿ ಕ್ರಿಕ್‌ ಬಜ್‌ ವರದಿ ಮಾಡಿದೆ.

ಅಕ್ಟೋಬರ್‌ 15ರಂದು ಪಾಕಿಸ್ತಾನದಲ್ಲಿ ನಡೆದಿದ್ದ ಶಾಂಘೈ ಕೋಆಪರೇಶನ್‌ ಆರ್ಗನೈಸೇ ಷನ್ (Shanghai Cooperation Organisation) ಶೃಂಗದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ(Foreign Minister Jaishankar) ಸಚಿವ ಎಸ್.ಜೈಶಂಕರ್‌ ಪಾಲ್ಗೊಂಡಿದ್ದರು. ಈ ವೇಳೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಪಾಕ್‌ ಸರ್ಕಾರ ಮತ್ತು ಕ್ರಿಕೆಟ್‌ ಮಂಡಳಿ ಮನವಿ ಸಲ್ಲಿಸಿತ್ತು ಎನ್ನಲಾಗಿದೆ.

ಇದನ್ನೂ ಓದಿ Champions Trophy: ಭಾರತದ ಪಂದ್ಯಗಳು ಪಾಕಿಸ್ತಾನದಿಂದ ದುಬೈಗೆ ಸ್ಥಳಾಂತರ!

ಇದಕ್ಕೂ ಮುನ್ನ ಬಿಸಿಸಿಐ(BCCI) ಉಪಾಧ್ಯಕ್ಷ ರಾಜೀವ್‌ ಶುಕ್ಲಾ(Rajeev Shukla) ಅವರು ಚಾಂಪಿಯನ್ಸ್‌ ಟ್ರೋಫಿ ಆಡಲು ಭಾರತ ತಂಡ ಪಾಕ್‌ಗೆ ತೆರಳುವ ವಿಚಾರದಲ್ಲಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದರು. ಪಾಕಿಸ್ತಾನಕ್ಕೆ ತೆರಳಬೇಕೇ ಬೇಡವೇ ಎಂಬುದನ್ನು ಕೇಂದ್ರ ಸರ್ಕಾರ(Indian government) ನಿರ್ಧರಿಸಲಿದೆ ಎಂಬುದಾಗಿ ಹೇಳಿದ್ದರು. ಭಾರತ ತಂಡ ಪಾಕ್‌ಗೆ ತೆರಳುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಪ್ರತಿಯೊಂದು ಅಂತಾರಾಷ್ಟ್ರೀಯ ಪ್ರವಾಸಕ್ಕೂ ಕೇಂದ್ರದ ಸಮ್ಮತಿ ಪಡೆಯುವುದು ನಮ್ಮ ನೀತಿಯಾಗಿದೆ. ಇಲ್ಲಿ ಸರ್ಕಾರದ ನಿರ್ಧಾರವೇ ಅಂತಿಮ. ಪಾಕ್‌ಗೆ ತೆರಳುವ ವಿಚಾರಕ್ಕೂ ಇದು ಅನ್ವಯಿಸುತ್ತದೆ. ಕೇಂದ್ರ ಏನು ಹೇಳುತ್ತದೋ ಬಿಸಿಸಿಐ ಅದನ್ನು ಪಾಲಿಸುತ್ತದೆ ಎಂದು ರಾಜೀವ್‌ ಶುಕ್ಲಾ ಹೇಳಿದ್ದರು.

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.