Tuesday, 19th November 2024

Champions Trophy Schedule: ಇನ್ನೆರಡು ದಿನದಲ್ಲಿ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಪ್ರಕಟ

ದುಬೈ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಆವೃತ್ತಿಯ ವೇಳಾಪಟ್ಟಿಯನ್ನು(Champions Trophy Schedule) ಒಂದೆರಡು ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಇಂದು ಐಸಿಸಿ ಮತ್ತು ಪಾಕ್‌ ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಇದೇ ವಾರ ಟೂರ್ನಿಯ ಅಧಿಕೃತ ವೇಳಾಪಟ್ಟಿ ಕೂಡ ಪ್ರಕಟಗೊಳ್ಳಲಿದೆ ಎಂದು ವರದಿಯಲ್ಲಿ ತಿಳಿಸಿದೆ.

“ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ವಿಚಾರದಲ್ಲಿ ಆತಿಥೇಯರು ಮತ್ತು ಭಾಗವಹಿಸುವ ಸದಸ್ಯ ರಾಷ್ಟ್ರದೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಇದು ಶೀಘ್ರದಲ್ಲೇ ಮುಕ್ತಾಯೊಳ್ಳುವ ವಿಶ್ವಾಸವಿದೆ. ಬಹುಶಃ ಒಂದೆರಡು ದಿನಗಳಲ್ಲಿ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ” ಎಂದು ಐಸಿಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಭಾರತ ತಂಡ ಪಾಕಿಸ್ತಾನಕ್ಕೆ ತೆರಳದ ಕಾರಣ ಟೂರ್ನಿ ಹೈಬ್ರೀಡ್‌ ಮಾದರಿಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದ್ದರೂ ಪಾಕ್‌ ಕ್ರಿಕೆಟ್‌ ಮಂಡಳಿ ಮಾತ್ರ ಎಲ್ಲ 8 ತಂಡಗಳು ಸಂಪೂರ್ಣವಾಗಿ ಪಾಕಿಸ್ತಾನದಲ್ಲಿಯೇ ಪಂದ್ಯಗಳನ್ನು ಆಡಲಿದೆ ಎಂದು ಪದೇಪದೆ ಹೇಳುತ್ತಿದೆ. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ, ಎಂಟು ತಂಡಗಳ ಪಂದ್ಯಾವಳಿಗೆ ಸುಗಮ ಯೋಜನೆಗೆ ಅನುಕೂಲವಾಗುವಂತೆ ಹೈಬ್ರಿಡ್ ಮಾದರಿಯತ್ತ ಕೆಲಸ ಮಾಡಲು ಪಾಕಿಸ್ತಾನವನ್ನು ಐಸಿಸಿ ಒತ್ತಾಯಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಒಂದೊಮ್ಮೆ ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ ಪಾಕ್‌ ಕ್ರಿಕೆಟ್‌ ಮಂಡಳಿಗೆ ಉಂಟಾಗುವ ನಷ್ಟದ ಬಗ್ಗೆಯೂ ಐಸಿಸಿ ಮನವರಿಕೆ ಮಾಡಿದೆ. ಆದರೆ ಪಿಸಿಬಿ ಮಾತ್ರ ಪಟ್ಟು ಬಿಡದೆ ಟೂರ್ನಿ ನಡೆಸುವುದಾದರೆ ಪಾಕ್ನಲ್ಲಿಯೇ ನಡೆಯಬೇಕು ಎಂದು ಹೇಳುತ್ತಿದೆ.

ಇದನ್ನೂ ಓದಿ Champions Trophy: ಪಿಒಕೆ ಚಾಂಪಿಯನ್ಸ್‌ ಟ್ರೋಫಿ ಪ್ರವಾಸ ಕೈ ಬಿಟ್ಟ ಪಾಕ್‌

ಬಿಸಿಸಿಐ ಷರತ್ತಿನಂತೆ ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸಲಾಗುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನವೀಕರಣ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಸಿಬಿ ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಉತ್ಸುಕವಾಗಿಲ್ಲ. ಚಾಂಪಿಯನ್ಸ್‌ ಟ್ರೋಫಿ ವಿಚಾರದಲ್ಲಿ ಐಸಿಸಿ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಈಗಾಗಲೇ ಟ್ರೋಫಿ ಆಯೋಜಿಸುವ ಸಲುವಾಗಿ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ನವೀಕರಿಸಲು ಪಾಕಿಸ್ತಾನವು 17 ಶತಕೋಟಿ ರೂ.ಗಳನ್ನ ವಿನಿಯೋಗಿಸಿದೆ. ಅಲ್ಲದೇ ಇದು ಪಾಕಿಸ್ತಾನದ ಪ್ರತಿಷ್ಠೆಯಾಗಿದ್ದು, ಭಾರತ ತಂಡಕ್ಕಾಗಿ ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ಪ್ರತ್ಯೇಕ ವಿಷಯಗಳು, ನಾವು ಎರಡನ್ನು ಒಟ್ಟಿಗೆ ಸೇರಿಸುವುದಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ ಎಲ್ಲಾ ತಂಡಗಳು ಬರಲು ಸಿದ್ಧವಾಗಿವೆ. ಭಾರತಕ್ಕೆ ಕಾಳಜಿ ಇದ್ದರೆ ಬರಲಿ. ನಾವು ಕಾಳಜಿಯಿಂದ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.