Thursday, 14th November 2024

Champions Trophy: ಚಾಂಪಿಯನ್ಸ್‌ ಟ್ರೋಫಿ ದಕ್ಷಿಣ ಆಫ್ರಿಕಾಗೆ ಶಿಫ್ಟ್‌? ಪಾಕಿಸ್ತಾನಕ್ಕೆ ಐಸಿಸಿ ವಾರ್ನಿಂಗ್‌!

ICC Champions Trophy

ನವದೆಹಲಿ: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy) ಟೂರ್ನಿಯನ್ನು ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಅದರಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಟೂರ್ನಿಯಲ್ಲಿನ ಭಾರತ ತಂಡದ ಪಂದ್ಯಗಳನ್ನು ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸಲು ಸೂಚನೆ ನೀಡಿದೆ. ಆದರೆ, ಇದಕ್ಕೆ ಪಿಸಿಬಿ ಒಪ್ಪಿಲ್ಲವಾದರೆ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.

ಪಾಕಿಸ್ತಾನ ಟೂರ್ನಿಯ ಬಹುತೇಕ ಪಂದ್ಯಗಳನ್ನು ತನ್ನ ದೇಶದಲ್ಲಿ ಆಡಿಸಬೇಕು ಹಾಗೂ ಭಾರತ ತಂಡದ ಪಂದ್ಯಗಳನ್ನು ದುಬೈನಲ್ಲಿ ಆಡಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಯೋಜನೆ ರೂಪಿಸಿದೆ. ಟೂರ್ನಿಯ ಪಂದ್ಯ ಕೂಡ ಯುಎಇನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಹೈಬ್ರಿಡ್‌ ಮಾಡೆಲ್‌ ಅನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಒಪ್ಪಿಕೊಂಡರೆ ಪಿಸಿಬಿಗೆ ಟೂರ್ನಿಯ ಸಂಪೂರ್ಣ ಆತಿಥ್ಯದ ಹಕ್ಕುಗಳನ್ನು ನೀಡಲಾಗುತ್ತದೆ. ಆದರೆ, ಇಲ್ಲಿಯವರೆಗೂ ಪಿಸಿಬಿ ಎಲ್ಲಾ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸಬೇಕೆಂಬ ಒಮ್ಮತವನ್ನು ಹೊಂದಿದೆ.

Champions Trophy 2025: ಹೈಬ್ರೀಡ್‌ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ; ವರದಿ ತಳ್ಳಿ ಹಾಕಿದ ಪಾಕ್‌

ಚಾಂಪಿಯನ್ಸ್‌ ಟ್ರೋಫಿ ದಕ್ಷಿಣ ಆಫ್ರಿಕಾಗೆ ಶಿಫ್ಟ್‌?

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸುವ ಬಗ್ಗೆ ಖಚಿತಪಡಿಸುವಂತೆ ಪಿಸಿಬಿಗೆ ಐಸಿಸಿ ಪತ್ರ ಬರೆದಿದೆ ಎಂದು ಪಿಟಿಐ ವರದಿ ಮಾಡಿದೆ. ಒಂದು ವೇಳೆ ಹೈಬ್ರಿಡ್‌ ಮಾದರಿಯನ್ನು ಪಿಸಿಬಿ ಸ್ವೀಕರಿಸಿಲ್ಲವಾದರೆ, ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಐಸಿಸಿ ಸ್ಥಳಾಂತರಿಸಬಹುದು. ಈ ಬಗ್ಗೆ ಇನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ, ವರದಿಗಳ ಪ್ರಕಾರ ಈ ಬಗ್ಗೆ ಪಿಸಿಬಿ, ಪಾಕಿಸ್ತಾನ ಸರ್ಕಾರದ ಬಳಿ ಈ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಕ್ರೀಡಾ ನ್ಯಾಯಾಲಯಕ್ಕೆ ಪಿಸಿಬಿ ಮೊರೆ?

ಮತ್ತೊಂದೆಡೆ ಭಾರತವನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಕರೆದೊಯ್ಯುವುದು ಹಾಗೂ ಯಾವುದೇ ಐಸಿಸಿ ಟೂರ್ನಿಗಳಲ್ಲಿ ಭಾರತದ ವಿರುದ್ಧ ಆಡದಿರುವುದು ಮತ್ತು 2036ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಭಾರತದ ಪ್ರಯತ್ನದ ವಿರುದ್ಧ ಲಾಬಿ ಮಾಡುವಂತಹ ಕಾನೂನು ಆಯ್ಕೆಗಳಿಗೆ ಪಿಸಿಬಿ ಮೊರೆ ಹೊಗಲಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

2008ರ ಏಷ್ಯಾ ಕಪ್‌ ಟೂರ್ನಿಯ ಬಳಿಕ ಭಾರತ ತಂಡ ಪಾಕಿಸ್ತಾನದ ನೆಲದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 2012-13ರ ಸಾಲಿನ ಬಳಿಕ ದ್ವಿಪಕ್ಷೀಯ ಸರಣಿಗಳಲ್ಲಿ ಆಡುತ್ತಿಲ್ಲ. ಇದರೆ ಬದಲಿಗೆ ಕೇವಲ ಐಸಿಸಿ ಹಾಗೂ ಎಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಚ ಪಾಕಿಸ್ತಾನ ಏಷ್ಯಾ ಕಪ್‌ ಟೂರ್ನಿಗೆ ಆತಿಥ್ಯ ವಹಿಸಿತ್ತು. ಆದರೆ, ಭಾರತ ತಂಡದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು.

Champions Trophy 2025: ಭದ್ರತೆ ಪರಿಶೀಲನೆಗೆ ಪಾಕ್‌ಗೆ ಭೇಟಿ ಕೊಟ್ಟ ಐಸಿಸಿ; ಲಾಹೋರ್‌ನಲ್ಲಿ ಭಾರತದ ಪಂದ್ಯ!