ಲಂಡನ್: ಜೀವ ಬೆದರಿಕೆ ಕಾರಣವೊಡ್ಡಿ 2021ರಲ್ಲಿ ಪಾಕಿಸ್ತಾನದಲ್ಲಿ ಸರಣಿ ಆಡಲು ನಿರಾಕರಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇದೀಗ ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿ(Champions Trophy) ಆತಿಥ್ಯ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬೆಂಬಲ ಸೂಚಿಸಿದೆ. ಭದ್ರತೆಯ ಕಾರಣ ನೀಡಿ ಟೂರ್ನಿಯನ್ನು ಪಾಕ್‌ನಿಂದ ಸ್ಥಳಾಂತರಿಸಲು ಬಿಸಿಸಿಐ ಐಸಿಸಿಗೆ ಮನವಿ ಮಾಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಲಂಡನ್ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಅವರನ್ನು ಭೇಟಿಯಾಗಿದ್ದು ಅವರ ಬಳಿಕ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ವಿಚಾರದಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪಿಸಿಬಿ ಜತೆ ನಿಲ್ಲುವುದಾಗಿ ಭರವಸೆ ನೀಡಿದೆ ಎಂದು ವರದಿಯಾಗಿದೆ. ರಿಚರ್ಡ್ ಥಾಂಪ್ಸನ್ ಜತೆ ಮಾತುಕತೆ ನಡೆಸಿರುವ ಫೋಟೊವನ್ನು ಪಿಸಿಬಿ ತನ್ನ ಅಧಿಕೃತ ಟ್ವೀಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಕ್ರಿಕೆಟ್ ಜಗತ್ತಿನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡ ಬಿಸಿಸಿಐನಷ್ಟೇ ಪ್ರಾಬಲ್ಯ ಹೊಂದಿದೆ. ಇದೇ ಕಾರಣಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸಹಾಯ ಕೇಳಿದೆ ಇಸಿಬಿ ಪಿಸಿಬಿ ಪರ ನಿಂತರೆ ಆಗ ಐಸಿಸಿಗೆ ಏಕ ಪಕ್ಷೀಯವಾಗಿ ಟೂರ್ನಿಯ ಆತಿಥ್ಯದ ವಿಚಾರದಲ್ಲಿ ಅಷ್ಟು ಸಲುಭವಾಗಿ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಯಶಸ್ವಿಯಾಗಿ ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷರು ಭೇಟಿ ವೇಳೆ ಹೇಳಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿದೆ.
ಇದನ್ನೂ ಓದಿ Champions Trophy: ಪಿಒಕೆ ಚಾಂಪಿಯನ್ಸ್ ಟ್ರೋಫಿ ಪ್ರವಾಸ ಕೈ ಬಿಟ್ಟ ಪಾಕ್
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ(ICC) ಆಕ್ಷೇಪಣೆ ಸಲ್ಲಿಸಿದ ನಂತರ ಚಾಂಪಿಯನ್ಸ್ ಟ್ರೋಫಿ(Champions Trophy) ಪ್ರವಾಸವನ್ನು ಮೂರು ಆತಿಥೇಯ ನಗರಗಳಾದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಗೆ ಸೀಮಿತಗೊಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಪ್ಪಿಕೊಂಡಿದೆ.
ಚಾಂಪಿಯನ್ಸ್(Champions Trophy) ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ನಿರ್ಧಾರದ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕೃತವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಲಿಖಿತ ವಿವರಣೆಯನ್ನು ಕೇಳಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ನಿರ್ಧಾರವನ್ನು ಬಿಸಿಸಿಐ ಐಸಿಸಿಗೆ ಮೌಖಿಕವಾಗಿ ತಿಳಿಸಿದ ನಂತರ ಈ ಬೆಳವಣಿಗೆ ನಡೆದಿದೆ.