ನವದೆಹಲಿ: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ಟೂರ್ನಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿದೆ. ಟೀಮ್ ಇಂಡಿಯಾ, ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಐಸಿಸಿ ತಿಳಿಸಿರುವುದಾಗಿ ಪಿಸಿಬಿ ಅಧಿಕಾರಿ ಮೊಹ್ಸಿನ್ ನಖ್ವಿ ಕೂಡ ಬಹಿರಂಗಪಡಿಸಿದ್ದಾರೆ. ಬಿಸಿಸಿಐನ ಈ ನಿರ್ಧಾರದಿಂದ ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾವೇದ್ ಮಿಯಾಂದಾದ್ ಎಚ್ಚರಿಕೆ
ಭಆರತ ಹಾಗೂ ಪಾಕಿಸ್ತಾನ ತಂಡಗಳು ರಾಜಕೀಯ ಕಾರಣಗಳಿಂದ 2012ರಿಂದ ಇಲ್ಲಿಯವರೆಗೂ ದ್ವಿಪಕ್ಷೀಯ ಸರಣಿಗಳನ್ನು ಆಡುತ್ತಿಲ್ಲ. ಆದರೆ, ಐಸಿಸಿ ಹಾಗೂ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಆಯೋಜನೆಯ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಆದರೆ, ಮುಂದಿನ ವರ್ಷದ ಆರಂಭದಲ್ಲಿ ಪಾಕಿಸ್ತಾನ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದೆ. ಆದರೆ, ಭಾರತ ತಂಡ ಪಾಕ್ಗೆ ತೆರಳಲು ನಿರಾಕರಿಸಿದೆ ಹಾಗೂ ಟೀಮ್ ಇಂಡಿಯಾದ ಪಂದ್ಯಗಳು ಪರ್ಯಾಯ ಸ್ಥಳದಲ್ಲಿ ಆಡಿಸಬೇಕೆಂದು ಪಟ್ಟು ಹಿಡಿದಿದೆ. ಈ ಸಂಗತಿ ಖಚಿತವಾಗುತ್ತಿದ್ದಂತೆ ಪಾಕ್ನ ಮಾಜಿ ಕ್ರಿಕೆಟಿಗರು ಕಿಡಿ ಕಾರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್, ಭಾರತ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವ ಬಗ್ಗೆ ಮಾತನಾಡಿದ್ದಾರೆ. “ಇದು ತಮಾಷೆಯೇ? ನಾವು ಭಾರತದೊಂದಿಗೆ ಆಡದಿದ್ದರೂ ವಿಶ್ವ ಕ್ರಿಕೆಟ್ನಲ್ಲಿ ಪ್ರಗತಿ ಸಾಧಿಸುತ್ತೇವೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಪಂದ್ಯವಿಲ್ಲದಿದ್ದರೆ ಐಸಿಸಿ ಹೇಗೆ ಹಣ ಗಳಿಸುತ್ತದೆ ಎಂಬುದನ್ನು ನಾನು ನೋಡಬೇಕು,” ಎಂದು ಜಾವೇದ್ ಮಿಯಾಂದದ್ ಎಚ್ಚರಿಕೆ ನೀಡಿದ್ದಾರೆ.
ಇಂಝಮಾಮ್ ಉಲ್ ಹಕ್ ಹೇಳಿದ್ದೇನು?
ಪಾಕಿಸ್ತಾನ ತಂಡದ ಮಾಜಿ ನಾಯಕ ಇಂಝಮಾಮ್-ಉಲ್-ಹಕ್, “ಅವರು (ಭಾರತ ತಂಡ) ಕ್ರಿಕೆಟ್ನಿಂದ ಅಂತಹ ದೊಡ್ಡ ಅವಕಾಶವನ್ನು ಕಸಿದುಕೊಳ್ಳುತ್ತಿದ್ದಾರೆ. ಪಾಕಿಸ್ತಾನದಲ್ಲಿ ಭಾರತ ತಂಡಕ್ಕೆ ಯಾವುದೇ ಬೆದರಿಕೆ ಇಲ್ಲ. ವಾಸ್ತವವಾಗಿ, ಭಾರತ ತಂಡ ಇಲ್ಲಿ ಅತ್ಯುತ್ತಮ ಆತಿಥ್ಯವನ್ನು ಪಡೆದುಕೊಳ್ಳಲಿದೆ,” ಎಂದು ಇಂಝಮಾಮ್ ಉಲ್ ಹಕ್ ತಿಳಿಸಿದ್ದಾರೆ.
ಭಾರತದ ಸಮಸ್ಯೆ ಏನು: ರಶಿದ್ ಲತೀಫ್
ಪಾಕಿಸ್ತಾನದ ಮತ್ತೋರ್ವ ಮಾಜಿ ನಾಯಕ ರಶೀದ್ ಲತಿಫ್, “ಭಾರತದ ಈ ನಿಲುವು ಸ್ವೀಕಾರಾರ್ಹವಲ್ಲ. ಸಾಕು-ಸಾಕು ನಿಲ್ಲಿಸಿ. ಎಲ್ಲಾ ತಂಡಗಳು ಪಾಕಿಸ್ತಾನದಲ್ಲಿ ಯಾವುದೇ ತೊಂದರೆಯಿಲ್ಲದೆ ಆಡುತ್ತಿರುವಾಗ, ಭಾರತದ ಈ ನಿರ್ಧಾರವು ಸಂಪೂರ್ಣವಾಗಿ ರಾಜಕೀಯವಾಗಿದೆ ಮತ್ತು ಇದು ಕ್ರಿಕೆಟ್, ಹಾಕಿ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲಿ ಸ್ವೀಕಾರಾರ್ಹವಲ್ಲ,” ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು
ಇದರ ನಡುವೆ ಚಾಂಪಿಯನ್ಸ್ ಟ್ರೋಫಿಯಿಂದ ಪ್ರಾರಂಭವಾಗುವ ಯಾವುದೇ ಐಸಿಸಿ ಅಥವಾ ಇತರೆ ದೊಡ್ಡ ಟೂರ್ನಿಗಳಲ್ಲಿ ಭಾರತ ಸರ್ಕಾರವು ತನ್ನ ನೀತಿಯನ್ನು ಬದಲಾಯಿಸುವವರೆಗೆ ಆಡುವುದನ್ನು ನಿಲ್ಲಿಸುವಂತೆ ಪಾಕಿಸ್ತಾನ ಸರ್ಕಾರವು ಪಿಸಿಬಿಗೆ ನಿರ್ದೇಶಿಸಬಹುದು ಎಂದು ವರದಿಯಾಗಿದೆ. ಕಳೆದ 15 ದಿನಗಳಲ್ಲಿ ಹಲವಾರು ವರದಿಗಳು ಹೊರಹೊಮ್ಮಿವೆ, ಅವುಗಳಲ್ಲಿ ಕೆಲವು ಹೈಬ್ರಿಡ್ ಮಾದರಿಯ ಭಾರತದ ವಿನಂತಿಯನ್ನು ಸ್ವೀಕರಿಸಲಾಗುವುದು ಎಂದು ಹೇಳಿಕೊಂಡಿದೆ. ಅದರಂತೆ ಭಾರತದ ಪಂದ್ಯಗಳನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ಆಡಲಾಗುತ್ತದೆ. ಆದರೆ ಅಂತಹ ಮಾದರಿಯು ಐಸಿಸಿಯಿಂದ ಅನುಮೋದನೆ ಪಡೆಯುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. 2023 ರಲ್ಲಿ ಪಾಕಿಸ್ತಾನ ಆತಿಥ್ಯ ವಹಿಸಿದ್ದ ಏಷ್ಯಾಕಪ್ನಲ್ಲಿ ಫೈನಲ್ ಸೇರಿದಂತೆ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿತ್ತು.