Friday, 15th November 2024

Champions Trophy: ಬಿಸಿಸಿಐನಿಂದ ಲಿಖಿತ ದೃಢೀಕರಣ ಪತ್ರ ಕೇಳಿದ ಐಸಿಸಿ?

ದುಬೈ: ಮುಂದಿನ ವರ್ಷದ ಚಾಂಪಿಯನ್ಸ್(Champions Trophy) ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ನಿರ್ಧಾರದ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕೃತವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಲಿಖಿತ ವಿವರಣೆಯನ್ನು ಕೇಳಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ನಿರ್ಧಾರವನ್ನು ಬಿಸಿಸಿಐ ಐಸಿಸಿಗೆ ಮೌಖಿಕವಾಗಿ ತಿಳಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಬಿಸಿಸಿಐ ನೀಡಿದ ಕಾರಣಗಳನ್ನು ಪರಿಶೀಲಿಸಿದ ನಂತರ ಐಸಿಸಿ ಭಾರತದ ಪಾಲ್ಗೊಳ್ಳುವಿಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ. ಕಳೆದ ವಾರ ಭಾರತ ತಂಡ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ತೆರಳದು ಎಂದು ಐಸಿಸಿಗೆ ಬಿಸಿಸಿಐ ತನ್ನ ನಿಲುವನ್ನು ಸೂಚಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ(ಪಿಸಿಬಿ) ಐಸಿಸಿಗೆ ಪತ್ರ ಬರೆದು, ಭಾರತ ತಂಡ ಪಾಕ್‌ನಲ್ಲಿ ಆಡದಿರುವ ಸೂಕ್ತ ಕಾರಣವನ್ನು ಬಿಸಿಸಿಐನಿಂದ ಲಿಖಿತ ದೃಢೀಕರಣ ಪತ್ರವನ್ನು ಪಡೆಯುವಂತೆ ಪಿಸಿಬಿ ಪತ್ರದಲ್ಲಿ ಉಲ್ಲೇಖಿಸಿತ್ತು. ಇದೀಗ ಐಸಿಸಿ ಪಾಕ್‌ ಮನವಿಯ ಪ್ರಕಾರ ಬಿಸಿಸಿಐಗೆ ಲಿಖಿತ ವಿವರಣೆಯನ್ನು ಕೇಳಿದೆ ಎಂದು ವರದಿಯಾಗಿದೆ. ಈ ಬಗ್ಗೆ ಇದುವರೆಗೂ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ ವರ್ಷ ಪೂರೈಸಿದ ಎಐಸಿಸಿ ಅಧ್ಯಕ್ಷರು

ಇನ್ನೊಂದೆಡೆ ಯಾವುದೇ ಕಾರಣಕ್ಕೂ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರೆ, ಐಸಿಸಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ. ತೀರ್ಪು ಯಾವುದೇ ದೇಶದ ಪರವಾಗಿ ಬಂದರೂ ದೊಡ್ಡ ವಿವಾದ ಸೃಷ್ಟಿಯಾಗುವ ಸಾಧ್ಯತೆಯಿದೆ.

ಈ ಎಲ್ಲ ಬೆಳವಣಿಗೆ ಮಧ್ಯೆ ಟ್ರೋಫಿ ಉತ್ತರ ಪಾಕಿಸ್ತಾನದ ಸ್ಕರ್ಡುನಿಂದ ನ. 16ರಂದು ಟ್ರೋಫಿ ಪ್ರವಾಸ ಪ್ರಾರಂಭವಾಗುತ್ತದೆ. ಪಂದ್ಯಗಳು ನಡೆಯಲಿರುವ ಪ್ರಮುಖ ನಗರಗಳಲ್ಲಿ ಟ್ರೋಫಿಯ ಪ್ರದರ್ಶನ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಕೂಟವು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದ್ದು, ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಆಯೋಜನೆ ನಡೆಯದಿದ್ದರೆ ಕೂಟದಲ್ಲಿ ಪಾಕಿಸ್ತಾನ ತಂಡವು ಆಡದೆ ಇರುವ ಸಾಧ್ಯೆತೆಯಿದೆ. ಪಿಸಿಬಿಗೆ ಪಾಕಿಸ್ತಾನ ಸರ್ಕಾರ ಈ ಬಗ್ಗೆ ಈಗಾಗಲೇ ಸೂಚನೆ ನೀಡಿದೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಯದಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ನಡೆಯಬಹುದು ಎನ್ನುತ್ತಿದೆ ವರದಿ.