Sunday, 24th November 2024

ಇಂದು ನಡೆಯಬೇಕಿದ್ದ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಬಿಡುಗಡೆ ಕಾರ್ಯಕ್ರಮ ದಿಢೀರ್‌ ರದ್ದು

ದುಬೈ: ಮುಂದಿನ ವರ್ಷ ನಡೆಯುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌(Champions Trophy) ಪಂದ್ಯಾವಳಿಯ ಆತಿಥ್ಯದ ಸಮಸ್ಯೆ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಆತಿಥ್ಯಕ್ಕೆ ಪಾಕಿಸ್ತಾನ ಸಕಲ ಸಿದ್ಧತೆಯಲ್ಲಿರುವಾಗಲೇ ಐಸಿಸಿ(ICC) ಬಲವಾದ ಆಘಾತವೊಂದನ್ನು ನೀಡಿದೆ. ಇಂದು (ಸೋಮವಾರ) ಲಾಹೋರ್‌ನಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆ ಕಾರ್ಯಕ್ರಮವನ್ನು ದಿಢೀರ್‌ ರದ್ದುಗೊಳಿಸಿದೆ.

ಭಾರತ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ತೆರಳದು ಎಂದು ಬಿಸಿಸಿಐ ಐಸಿಸಿಗೆ ಸೂಚಿಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ವೇಳಾಪಟ್ಟಿಗೆ ಸಂಬಂಧಿಸಿದಂತೆ ಪಿಸಿಬಿ ಮತ್ತು ಬಿಸಿಸಿಐ ನಡುವೆ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯದಿಂದ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ʼಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ನಾವು ಆತಿಥೇಯ ದೇಶ ಹಾಗೂ ಇದರಲ್ಲಿ ಪಾಲ್ಗೊಳ್ಳುತ್ತಿರುವ ದೇಶಗಳೊಂದಿಗೆ ಚರ್ಚಿಸುತ್ತಿದ್ದೇವೆ. ಒಮ್ಮೆ ಖಚಿತಗೊಂಡ ಬಳಿಕ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ’ ಎಂದು ಐಸಿಸಿ ಮೂಲವೊಂದು ತಿಳಿಸಿದೆ. ಈ ಎಲ್ಲ ಬೆಳವಣಿಗೆ ಮಧ್ಯೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಇದೇ ವಿಚಾರವಾಗಿ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದ ಮೆಟ್ಟಿಲೇರಲಿದೆ ಎಂದು ವರದಿಯಾಗಿದೆ.

ಒಂದೊಮ್ಮೆ ಟೂರ್ನಿ ಪಾಕ್​ನಲ್ಲಿಯೇ ನಡೆದು, ಭಾರತ ತಂಡ ಪಾಲ್ಗೊಳ್ಳಲಿದ್ದರೆ ಆಗ ಯಾವ ತಂಡಕ್ಕೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ. ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಟೂರ್ನಿಯ ಆತಿಥೇಯ ದೇಶಕ್ಕೆ ನೇರವಾಗಿ ಅರ್ಹತೆ ಸಿಗುತ್ತದೆ. ಒಟ್ಟು 8 ತಂಡಗಳು ಅರ್ಹತೆ ಪಡೆದಿದೆ.

ಇದನ್ನೂ ಓದಿ Champions Trophy: ಪಾಕ್‌ಗೆ ಪ್ರಯಾಣಿಸುವುದಿಲ್ಲ; ನಿಲುವು ಸ್ಪಷ್ಟಪಡಿಸಿದ ಬಿಸಿಸಿಐ

ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ, 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಯಾವುದೇ ತಂಡವು ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡ ತಂಡಕ್ಕೆ ಅರ್ಹತೆ ನೀಡಲಾಗುತ್ತದೆ. ಪ್ರಸ್ತುತ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದೆ. ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್ ಮತ್ತು ಬೇಡಿಕೆ​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ.