Sunday, 15th December 2024

Champions Trophy : ಡಿ 7ಕ್ಕೆ ಐಸಿಸಿ ಸಭೆ ಮುಂದೂಡಿಕೆ, ಹೈಬ್ರಿಡ್ ಮಾದರಿಯನ್ನು ಸ್ವೀಕರಿಸಲು ಪಿಸಿಬಿಗೆ ಸೂಚನೆ!

Champions Trophy

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಐಸಿಸಿ ಗುರುವಾರ ನಿಗದಿ ಪಡಿಸಿದ್ದ ಸಭೆಯನ್ನು ಡಿ. 7ಕ್ಕೆ ಮುಂದೂಡಿದೆ. ಈ ಸಭೆಯಲ್ಲಿ ಪಿಸಿಬಿ (PCB) ಹೈಬ್ರೀಡ್‌ ಮಾದರಿಯನ್ನು ಒಪ್ಪಿಕೊಳ್ಳಲು ಐಸಿಸಿ ಮತ್ತೊಮ್ಮೆ ಸೂಚನೆ ನೀಡಿದೆ.

ಗುರುವಾರ ನಡೆದಿದ್ದ ಅಲ್ಪಾವಧಿ ಸಭೆಯಲ್ಲಿ ನೂತನ ಐಸಿಸಿ ಅಧ್ಯಕ್ಷ ಜಯ ಶಾ ಹಾಗೂ ಪಿಬಿಸಿ ಮತ್ತು ಇತರ 10 ಸದಸ್ಯ ರಾಷ್ಟ್ರಗಳು ಭಾಗವಹಿಸಿದ್ದವು ಎಂದು ತಿಳಿದು ಬಂದಿದೆ. ಈ ಮೊದಲು, ಪಿಸಿಬಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿತ್ತು, ಆದರೆ ನಂತರ ಪಾಕಿಸ್ತಾನವು ಕೆಲವು ಷರತ್ತುಗಳೊಂದಿಗೆ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

2031ರ ವರಗೆ ಭಾರತದಲ್ಲಿ ಆತಿಥ್ಯದಲ್ಲಿ ನಡೆಯುವ ಐಸಿಸಿ ಟೂರ್ನಿಗಳನ್ನು ಕೂಡ ಹೈಬ್ರಿಡ್‌ ಮಾದರಿಯಲ್ಲಿ ನಡೆಸಬೇಕೆಂಬ ಷರತ್ತನ್ನು ಐಸಿಸಿಗೆ ಬಿಸಿಸಿಐ ವಿಧಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆ ಮೂಲಕ ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಖಡಕ್‌ ಆಗಿ ತಿಳಿಸಿದೆ. ಅಂದ ಹಾಗೆ ನವೆಂಬರ್ 29 ರಂದು 12 ರಾಷ್ಟ್ರಗಳ ಐಸಿಸಿ ಸಭೆಯಲ್ಲಿ ಭಾಗವಹಿಸಿದ್ದವು. ಇದೀಗ ಈ ಸಭೆಯನ್ನು ಡಿ. 7 ಕ್ಕೆ ಮುಂದೂಡಲಾಗಿದೆ.

ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಚಾಂಪಿಯನ್ಸ್ ಟ್ರೋಫಿ ನಡೆಯುವ ಮೂರು ಸ್ಥಳಗಳಾಗಿದ್ದು, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆದರೆ ಭಾರತದ ಪಂದ್ಯಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಬೇರೆ ಯಾವ ರಾಷ್ಟ್ರ ತೆಗೆದುಕೊಳ್ಳುತ್ತದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಆತಿಥ್ಯದ ಹಕ್ಕುಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ಆದರೆ, ಭದ್ರತಾ ಕಾರಣಗಳಿಂದಾಗಿ ಭಾರತ ತಂಡ, ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಈ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನದಲ್ಲಿ ಭದ್ರತಾ ತೊಂದರೆಗಳಿವೆ ಆದ್ದರಿಂದ ತಂಡವು ಅಲ್ಲಿಗೆ ಹೋಗುವ ಸಾಧ್ಯತೆಯಿಲ್ಲಎಂದು ತಿಳಿಸಿತ್ತು.

ಇದರ ನಡುವೆ ಐಸಿಸಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಜಯ ಶಾ ಅವರು ಡಿಸೆಂಬರ್ 5 ರಂದು ದುಬೈನಲ್ಲಿರುವ ಐಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯನ್ನು ಭೇಟಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು “ಈ ಭೇಟಿಯು ಐಸಿಸಿ ಮಂಡಳಿಯಲ್ಲಿ ನನ್ನ ಸಹೋದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸಲು ಅಮೂಲ್ಯವಾದ ಅವಕಾಶವನ್ನು ಒದಗಿಸಿದೆ,” ಎಂದು ಹೇಳಿದ್ದಾರೆ.

ಈ ಸುದ್ದಿಯನೂ ಓದಿ : Virat Kohli : ಕೊಹ್ಲಿ ದೇಶೀಯ ಕ್ರಿಕೆಟ್ ಆಡಬೇಕು, ಅವರು ನಿರಾಶೆಗೊಂಡಿದ್ದಾರೆ; ದಿನೇಶ್ ಕಾರ್ತಿಕ್‌