Friday, 15th November 2024

ICC Champions Trophy: ʼಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕುʼ-ಬಿಸಿಸಿಐಗೆ ರಶಿದ್‌ ಲತಿಫ್‌ ವಾರ್ನಿಂಗ್‌!

Ex-PAK Captain Rashid Latif Fires MASSIVE Champions Trophy 2025 Warning

ನವದೆಹಲಿ: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy) ಟೂರ್ನಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕೆಂದು ಪಾಕ್‌ ಮಾಜಿ ನಾಯಕ ಹಾಗೂ ವಿಕೆಟ್‌ ಕೀಪರ್‌ ರಶಿದ್‌ ಲತಿಫ್‌ ಆಗ್ರಹಿಸಿದ್ದಾರೆ. ಒಂದು ವೇಳೆ ಭಾರತ ತಂಡ ಬಂದಿಲ್ಲವಾದರೆ, ಈ ಟೂರ್ನಿಯಲ್ಲಿ ಭಾಗವಹಿಸದೆ ಪಾಕಿಸ್ತಾನ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ಈ ಬಾರಿ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ಕೂಡ ಪಾಕಿಸ್ತಾನಕ್ಕೆ ಬಂದು ಆಡಬೇಕೆಂದು ಪಿಸಿಬಿ ಆಗ್ರಹಿಸುತ್ತಿದೆ. ಆದರೆ, ಈ ಬಾರಿ ಟೂರ್ನಿಯನ್ನು ಆಡಲು ಭಾರತ ತಂಡ, ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದಿಲ್ಲ ಹಾಗೂ ಭಾರತ ತಂಡ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ ಎಂದು ವರೆದಿಯಾಗಿದೆ.

ಇದೀಗ ಪಾಕಿಸ್ತಾನ ಮಾಜಿ ನಾಯಕ ರಶಿದ್‌ ಲತಿಫ್‌ ಅವರು ಜಿಇಓ ನ್ಯೂಸ್‌ ಜತೆ ಮಾತನಾಡಿದ್ದಾರೆ. 2024 ರಿಂದ 2031ರವರೆಗೆ ಎಲ್ಲಾ ಟೂರ್ನಿಗಳಿಗೂ ತಯಾರಿಯನ್ನು ನಡೆಸಲಾಗುತ್ತಿದೆ. ಅದರಂತೆ ಎಲ್ಲಾ ತಂಡಗಳ ಪ್ರಾಯೋಜಕರು ಹಾಗೂ ಬ್ರ್ಯಾಡ್‌ಕಾಸ್ಟರ್ಸ್‌ ಸಹಿ ಹಾಕಿದ್ದಾರೆ. ಇವರೆಲ್ಲರಿಗೂ ನ್ಯಾಯವನ್ನು ಒದಗಿಸಬೇಕಾಗಿದೆ. ಇದನ್ನು ಬಿಟ್ಟು ಭದ್ರತೆಯ ಕಾರಣವನ್ನು ನೀಡಿ ಪಾಕಿಸ್ತಾನಕ್ಕೆ ಬರಲು ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ದೂರಿದ್ದಾರೆ.

“ಇದು ಐಸಿಸಿ ಆಯೋಜನೆಯ ಟೂರ್ನಿಯಾಗಿದೆ. 2024ರಿಂದ 2031ರವರೆಗಿನ ವೇಳಾಪಟ್ಟಿಗೆ ಸಹಿಯನ್ನು ಹಾಕಲಾಗಿದೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಅಥವಾ ವಿಶ್ವಕಪ್‌ ಟೂರ್ನಿಗಳಲ್ಲಿ ಭಾಗವಹಿಸುವ ಸಲುವಾಗಿ ಎಲ್ಲಾ ತಂಡಗಳ ಪ್ರಾಯೋಜಕರು ಮತ್ತು ಬ್ರ್ಯಾಡ್‌ಕಾಸ್ಟರ್‌ಗಳು ಸಹಿ ಹಾಕಿದ್ದಾರೆ,” ಎಂದು ರಶಿದ್‌ ಲತಿಫ್‌ ತಿಳಿಸಿದ್ದಾರೆ.

“ಟೂರ್ನಿಯಲ್ಲಿ ಭಾಗವಹಿಸಲು ತಂಡ ನಿರಾಕರಿಸಿದರೆ, ಅದಕ್ಕೆ ಬಲವಾದ ಕಾರಣವಿರಬೇಕು. 1996ರಲ್ಲಿ ವೆಸ್ಟ್‌ ಇಂಡೀಸ್‌ ಹಾಗೂ ಆಸ್ಟ್ರೇಲಿಯಾ ತಂಡಗಳು ಶ್ರೀಲಂಕಕ್ಕೆ ತೆರಳಲು ನಿರಾಕರಿಸಿದ್ದವು. ಆದರೆ, ಈ ಎರಡೂ ತಂಡಗಳು ಫೈನಲ್‌ಗೆ ಲಗ್ಗೆ ಇಟ್ಟಿದ್ದವು. ಭದ್ರತೆಯ ಬಗ್ಗೆ ಕಾರಣವನ್ನು ನೀಡುತ್ತಿರುವುದು ನ್ಯಾಯಯುತವಾಗಿಲ್ಲ. ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಪಾಕಿಸ್ತಾನಕ್ಕೆ ಆಗಮಿಸುತ್ತಿವೆ,” ಎಂದು ಅವರು ಹೇಳಿದ್ದಾರೆ,

ಪಾಕ್‌ಗೆ ಭಾರತ ಬಂದಿಲ್ಲವಾದರೆ, ನಮ್ಮ ತಂಡ ಆಡುವುದಿಲ್ಲ

“ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಕಾದಾಟ ನಡೆಸುವ ಕಾರಣ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಅತ್ಯಂತ ಆಸಕ್ತಿದಾಯಕವಾಗಿರುತ್ತದೆ. ಆದರೆ, ಭಾರತ ತಂಡ ಪಾಕಿಸ್ತಾನಕ್ಕೆ ಬಂದಿಲ್ಲವಾದರೆ, ನಮ್ಮ ತಂಡ ಕೂಡ ಆಡುವುದಿಲ್ಲ ಎಂದು ನಮ್ಮ ಸರ್ಕಾರ ಹೇಳಿದೆ. ಇಲ್ಲಿ ಐಸಿಸಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಹಾಗೂ ಯಾರೂ ಕೂಡ ಟೂರ್ನಿಯನ್ನು ನೋಡುವುದಿಲ್ಲ,” ಎಂದು ರಶಿದ್‌ ಲತಿಫ್‌ ಎಚ್ಚರಿಕೆ ನೀಡಿದ್ದಾರೆ.

“ಭಾರತ ತಂಡ, ಪಾಕಿಸ್ತಾನ ತಂಡದ ಜೊತೆ ದ್ವಿಪಕ್ಷೀಯ ಸರಣಿಯನ್ನು ಆಡುತ್ತಿಲ್ಲವೆಂದು ನಾವು ನೇರವಾಗಿ ಹೇಳಬಹುದು. ಆದರೆ, ಐಸಿಸಿ ಟೂರ್ನಿಗಳಿಗೆ ನೀವು ಸಹಿ ಮಾಡಿದ್ದು, ಟೂರ್ನಿಯಲ್ಲಿ ಆಡುವುದಿಲ್ಲವೆಂದು ನಿರಾಕರಿಸಲು ಸಾಧ್ಯವಿಲ್ಲ. ಒಂದು ವೇಳೆ ಭಾರತ ತಂಡ ಬಂದಿಲ್ಲವಾದರೆ, ಪಾಕಿಸ್ತಾನ ತಂಡ ಕೂಡ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಆಡದೆ ಇರುವ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲಿದೆ,” ಎಂದು ಬಿಸಿಸಿಐಗೆ ರಿಶಿದ್‌ ಲತಿಫ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಓದಿ: Champions Trophy 2025: ಹೈಬ್ರೀಡ್‌ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ; ವರದಿ ತಳ್ಳಿ ಹಾಕಿದ ಪಾಕ್‌