Sunday, 24th November 2024

Champions Trophy: ಭಾರತ ವಿರುದ್ಧ ಆಡುವುದಿಲ್ಲ; ಪಾಕ್‌ ಬೆದರಿಕೆ

ಕರಾಚಿ: ಪಾಕಿಸ್ತಾನದ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಬಿಸಿಸಿಐ(BCCI) ಈಗಾಗಲೇ ತನ್ನ ನಿಲುವನ್ನು ತಿಳಿಸಿದೆ. ಯಾವುದೇ ಕಾರಣಕ್ಕೂ ಪಾಕ್‌ಗೆ ಭಾರತ ತಂಡ ಪ್ರಯಾಣಿಸುವುದಿಲ್ಲ, ಟೂರ್ನಿ ಹೈಬ್ರಿಡ್​ ಮಾದರಿಯಲ್ಲಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಐಸಿಸಿಗೆ ಮತ್ತು ಪಾಕ್‌ ಕ್ರಿಕೆಟ್‌ ಮಂಡಳಿಗೆ ತಿಳಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕೂಡ ಭಾರತಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ. ಭಾರತ ತಂಡ ಪಾಕ್‌ಗೆ ಬಾರದಿದ್ದರೆ, ಇನ್ನು ಮುಂದೆ ಪಾಕ್‌ ತಂಡ ಭಾರತ ವಿರುದ್ಧ ಆಡುವುದಿಲ್ಲ ಎಂದು ಹೇಳಿದೆ.

ಪಾಕಿಸ್ತಾನ ಸರ್ಕಾರ ಕೂಡ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದು ಯಾವುದೇ ಕಾರಣಕ್ಕೂ ಹೈಬ್ರಿಡ್​ ಮಾದರಿಯ ಟೂರ್ನಿಗೆ ಒಪ್ಪಿಗೆ ಸೂಚಿಸಬಾರದು ಎಂದು ಪಾಕ್‌ ಕಿಕೆಟ್‌ ಮಂಡಳಿಗೆ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಬಿಸಿಸಿಐ (BCCI) ವಿರುದ್ಧ ಕೋರ್ಟ್ ಆಫ್​ ಆರ್ಬಿಟ್ರೇಷನ್ ಫಾರ್​ ಸ್ಪೋರ್ಟ್​​ಗೆ (CAS) ಮೇಲ್ಮನವಿ ಸಲ್ಲಿಸಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಸಜ್ಜಾಗಿದೆ ಎನ್ನಲಾಗಿದೆ.

ಇದನ್ನೂ ಓದಿ Champions Trophy: ಪಾಕ್‌ಗೆ ಪ್ರಯಾಣಿಸುವುದಿಲ್ಲ; ನಿಲುವು ಸ್ಪಷ್ಟಪಡಿಸಿದ ಬಿಸಿಸಿಐ

ಚಾಂಪಿಯನ್ಸ್ ಟ್ರೋಫಿಗಾಗಿ ನಮ್ಮ ಸಿದ್ಧತೆಗಳು ಸಹಜವಾಗಿ ನಡೆಯುತ್ತಿವೆ ಮತ್ತು ಅದೇ ಶೈಲಿಯಲ್ಲಿ ಮುಂದುವರಿಯುತ್ತದೆ. ಭಾರತವು ಹಿಂದೆ ಸರಿಯಲು ನಿರ್ಧರಿಸಿದರೆ, ನಾವು ಕೂಡ ಮುಂದಿನ ದಿನಗಳಲ್ಲಿ ಭಾರತ ವಿರುದ್ಧದ ಐಸಿಸಿ ಪಂದ್ಯಗಳನ್ನು ಆಡುವುದಿಲ್ಲ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ ಐಸಿಸಿಗೆ ತನ್ನ ನಿಲುವನ್ನು ತಿಳಿಸಿರುವುದಾಗಿ ವರದಿಯಾಗಿದೆ.

ಉಭಯ ದೇಶಗಳ ರಾಜತಾಂತ್ರಿಕ ಕಿತ್ತಾಟದಿಂದ ಟೂರ್ನಿಯನ್ನು ನಡೆಸುವುದು ಐಸಿಸಿಗೆ ನುಂಗಲಾರದ ತುತ್ತಾಗಿದೆ. ಟೂರ್ನಿ ನಡೆಯುವ 100 ದಿನ ಮುಂಚಿತವಾಗಿ ವೇಳಾಪಟ್ಟಿಯನ್ನು ಪ್ರಕಟಿಸಬೇಕಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಸದ್ಯ ಐಸಿಸಿ ಎರಡೂ ದೇಶಗಳ ಕ್ರಿಕೆಟ್‌ ಮಂಡಳಿ ಜತೆ ಚರ್ಚೆ ನಡೆಸುತ್ತಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರಕಟಿಸಿದ ವೇಳಾಪಟ್ಟಿ ಪ್ರಕಾರ ಪಂದ್ಯಾವಳಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದ್ದು, ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ಪಂದ್ಯಗಳನ್ನು ನಿಗದಿಪಡಿಸಿದೆ. ಭಾರತಕ್ಕೆ ಗಡಿ ಸಾಮೀಪ್ಯ ಇರುವ ಕಾರಣ ಲಾಹೋರ್‌ನಲ್ಲಿ ಭಾರತದ ಪಂದ್ಯಗಳನ್ನು ಯೋಜಿಸಿದೆ. ಪಂದ್ಯಾವಳಿಯಲ್ಲಿ ಭಾರತದ ಮೂರು ಗುಂಪು-ಹಂತದ ಪಂದ್ಯಗಳನ್ನು ಫೆಬ್ರವರಿ 20 (ಬಾಂಗ್ಲಾದೇಶ ವಿರುದ್ಧ), ಫೆಬ್ರವರಿ 23 (ಪಾಕಿಸ್ತಾನ ವಿರುದ್ಧ), ಮತ್ತು ಮಾರ್ಚ್ 2 (ನ್ಯೂಜಿಲೆಂಡ್ ವಿರುದ್ಧ) ರಂದು ನಿಗದಿಪಡಿಸಲಾಗಿದೆ.