ಕರಾಚಿ: ಚಾಂಪಿಯನ್ಸ್ ಟ್ರೋಫಿ(Champions Trophy) ಕ್ರಿಕೆಟ್ ಟೂರ್ನಿಯ ಆತಿಥ್ಯದ ಕಿತ್ತಾಟ ಇನ್ನೂ ಇತ್ಯರ್ಥ್ಯಗೊಂಡಿಲ್ಲ. ಜತೆಗೆ ಅಂತಿಮ ವೇಳಾಪಟ್ಟಿ ಕೂಡ ಪ್ರಕಟಗೊಂಡಿಲ್ಲ. ಆದರೆ, ಈ ಮಧ್ಯೆ ಟ್ರೋಫಿ ಪಾಕಿಸ್ತಾನ ತಲುಪಿದ್ದು, ದೇಶದ ವಿವಿಧೆಡೆ ಅದರ ಪ್ರದರ್ಶನ ನಡೆಯಲಿದೆ. ಉತ್ತರ ಪಾಕಿಸ್ತಾನದ ಸ್ಕರ್ಡುನಿಂದ ನ. 16ರಂದು ಟ್ರೋಫಿ ಪ್ರವಾಸ ಪ್ರಾರಂಭವಾಗುತ್ತದೆ. ಪಂದ್ಯಗಳು ನಡೆಯಲಿರುವ ಪ್ರಮುಖ ನಗರಗಳಲ್ಲಿ ಟ್ರೋಫಿಯ ಪ್ರದರ್ಶನ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಲಾಹೋರ್‌ನಲ್ಲಿ ಟ್ರೋಫಿಯನ್ನು ಅನಾವರಣಗೊಳ್ಳಬೇಕಿತ್ತು. ಬಿಸಿಸಿಐ, ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದು ಐಸಿಸಿಗೆ ತಿಳಿಸಿದ ನಂತರ ಸಮಾರಂಭವನ್ನು ಮುಂದೂಡಲಾಗಿತ್ತು. ಆ ಬಳಿಕ ಹಲವು ಬೆಳವಣಿಗೆ ಕೂಡ ನಡೆದಿತ್ತು. ಒಮ್ಮೆ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗುವುದು ಎಂದು ವರದಿಯಾಗಿತ್ತು. ಅತ್ತ ಪಾಕ್ ಕ್ರಿಕೆಟ್ ಮಂಡಳಿ ಟೂರ್ನಿಯನ್ನು ಪಾಕ್‌ನಿಂದ ಹೊರಗಡೆ ನಡೆಸಿದರೆ ಮುಂದೆ ನಡೆಯುವ ಐಸಿಸಿ ಟೂರ್ನಿಯಲ್ಲಿ ಭಾರತ ವಿರುದ್ಧ ಆಡುವುದಿಲ್ಲ ಎಂದು ಬೆದರಿಕೆಯೊಡ್ಡಿತ್ತು. ಇದೆಲ್ಲದರ ಮಧ್ಯೆ ಪಾಕಿಸ್ತಾನಕ್ಕೆ ಟ್ರೋಫಿ ಬಂದಿರುವುದು ಇದೀಗ ಬಿಸಿಸಿಐಗೆ ಚಿಂತೆಗೀಡು ಮಾಡಿದೆ.
ಇದನ್ನೂ ಓದಿ Japan Masters; ಜಪಾನ್ ಮಾಸ್ಟರ್ಸ್‌ನಲ್ಲಿ ಭಾರತದ ಸವಾಲು ಅಂತ್ಯ
ಭದ್ರತಾ ಕಾರಣಗಳಿಂದಾಗಿ ಭಾರತ ತಂಡವು ಪಾಕಿಸ್ತಾನದಲ್ಲಿ ಉಳಿಯಲು ಸಿದ್ಧರಿಲ್ಲದಿದ್ದರೆ ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳ ನಡುವೆ ಭಾರತವು ನವದೆಹಲಿ ಅಥವಾ ಚಂಡೀಗಢಕ್ಕೆ ಮರಳಲು ಅವಕಾಶ ನೀಡುವ ವ್ಯವಸ್ಥೆಯನ್ನು ಕೂಡ ಪಾಕ್ ಕ್ರಿಕೆಟ್ ಮಂಡಳಿ ಪ್ರಸ್ತಾಪಿಸಿದೆ. ಪ್ರತಿ ಪಂದ್ಯದ ಬಳಿಕ ಮರಳಿ ಭಾರತಕ್ಕೆ ಬರಬಹುದು ಎಂದು ಹೇಳಿದೆ.
ಚಾಂಪಿಯನ್ಸ್ ಟ್ರೋಫಿ ಕೂಟವು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದ್ದು, ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಭಾರತದ ಗಡಿಯ ಸಾಮೀಪ್ಯದ ಕಾರಣದಿಂದ ಲಾಹೋರ್ ನಲ್ಲಿ ಭಾರತದ ಪಂದ್ಯಗಳನ್ನು ಯೋಜಿಸಿದೆ. ಪಂದ್ಯಾವಳಿಯಲ್ಲಿ ಭಾರತದ ಮೂರು ಗುಂಪು-ಹಂತದ ಪಂದ್ಯಗಳನ್ನು ಫೆಬ್ರವರಿ 20 (ಬಾಂಗ್ಲಾದೇಶ ವಿರುದ್ಧ), ಫೆಬ್ರವರಿ 23 (ಪಾಕಿಸ್ತಾನ ವಿರುದ್ಧ), ಮತ್ತು ಮಾರ್ಚ್ 2 (ನ್ಯೂಜಿಲೆಂಡ್ ವಿರುದ್ಧ) ರಂದು ನಿಗದಿಪಡಿಸಲಾಗಿದೆ.