Thursday, 12th December 2024

‘ಚಿಯರ್‌ ಅಪ್‌’ ಅಭಿಯಾನಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಚಾಲನೆ

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ‘ಚಿಯರ್‌ ಅಪ್‌’ ಅಭಿಯಾನಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶನಿವಾರ ಚಾಲನೆ ನೀಡಿದರು.

ದೇಶದ 100 ಕ್ರೀಡಾಪಟುಗಳು ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅವರನ್ನು ಪ್ರೋತ್ಸಾಹಿಸಲು ದೇಶದ ವಿವಿಧ ಕಡೆಗಳಲ್ಲಿ ಆರು ಸಾವಿರ ಸೆಲ್ಫಿ ಪಾಯಿಂಟ್‌ಗಳನ್ನು ಇರಿಸಲಾಗುವುದು. ರೈಲು ನಿಲ್ದಾಣಗಳಲ್ಲಿ ಈ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ರೈಲ್ವೆ ಸಚಿವರು ಒಪ್ಪಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಹರಿಯಾಣದ ಮುಖ್ಯಮಂತ್ರಿಗಳು ಒಲಿಂಪಿಕ್ ಲಾಂಛನದೊಂದಿಗೆ ಸೆಲ್ಫಿ ಫೊಟೊ ತೆಗೆದುಕೊಂಡಿದ್ದಾರೆ. ದೇಶದ ಉದ್ದಗಲದಲ್ಲಿ ಇಂಥ ಪ್ರೇರಣಾತ್ಮಕ ಕಾರ್ಯಗಳು ನಡೆಯಬೇಕು. ಆ ಮೂಲಕ ದೇಶದ ಪ್ರಮುಖ ಶಕ್ತಿಗಳಲ್ಲಿ ಒಂದಾದ ಕ್ರೀಡೆಯನ್ನು ಬೆಳೆಸಲು ನೆರವಾಗ ಬೇಕು’ ಎಂದು ಕರೆ ನೀಡಿದರು.

ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್, ಕ್ರೀಡಾಪಟುಗಳಲ್ಲಿ ಈ ಬಾರಿ ಹೆಚ್ಚು ಉತ್ಸಾಹ ತುಂಬಿದೆ. ಟೋಕಿಯೊ ಒಲಿಂಪಿಕ್ಸ್‌ಗೆ ಹುಮ್ಮಸ್ಸಿನೊಂದಿಗೆ ತೆರಳಲು ಸಜ್ಜಾಗಿದ್ದಾರೆ ಎಂದರು.

ಮಾಜಿ ಹಾಕಿ ಪಟು ಎಂ.ಎಂ.ಸೋಮಯ್ಯ, ಹಾಕಿ ತಂಡಕ್ಕೆ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಕೋಚ್‌ಗಳು ಲಭಿಸಿದ್ದಾರೆ.  ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಉತ್ತಮ ಸ್ಥಿತಿಯಲ್ಲಿವೆ ಎಂದರು.