Tuesday, 19th November 2024

Commonwealth 2026: ಕಾಮನ್ವೆಲ್ತ್‌ ಗೇಮ್ಸ್‌ನಿಂದ ಹಾಕಿಗೆ ಕೊಕ್‌?

ಮೆಲ್ಬರ್ನ್: 2026ರಲ್ಲಿ ಗ್ಲಾಸ್ಗೋದಲ್ಲಿ(Glasgow Commonwealth Games) ನಡೆಯಲಿರುವ ಕಾಮನ್ವೆಲ್ತ್‌ ಗೇಮ್ಸ್‌ನಿಂದ(Commonwealth 2026) ಹಾಕಿಯನ್ನು(Commonwealth Games Hockey) ಕೈಬಿಡಲಾಗುವುದು ಎಂದು ವರದಿಯಾಗಿದೆ. ಆದರೆ, ಈ ವಿಚಾರವಾಗಿ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ (ಎಫ್‌ಐಎಚ್‌), ಕಾಮನ್ವೆಲ್ತ್‌ ಗೇಮ್ಸ್‌ ಫೆಡರೇಶನ್‌ (ಸಿಜಿಎಫ್) ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

1998ರಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ಆರಂಭವಾದಾಗಿನಿಂದಲೂ ಹಾಕಿ ಈ ಕ್ರೀಡಾಕೂಟದಲ್ಲಿ ಕಾಣಿಸಿಕೊಂಡಿತ್ತು. ಗೇಮ್ಸ್‌ನ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಗ್ಲಾಸ್ಗೋ ಗೇಮ್ಸ್‌ ಸಂಘಟಕರು ಹಾಕಿ, ನೆಟ್‌ಬಾಲ್‌ ಮತ್ತು ರೋಡ್‌ ರೇಸ್‌ ಸ್ಪರ್ಧೆಯನ್ನು ಕೈಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಣಕಾಸು ಸಮಸ್ಯೆಯಿಂದ ಆಸ್ಟ್ರೇಲಿಯದ ವಿಕ್ಟೋರಿಯಾ 2026ರ ಕ್ರೀಡಾಕೂಟದಿಂದ ಹಿಂದೆ ಸರಿದ ಕಾರಣ ಇದು ಗ್ಲಾಸ್ಗೋ ಪಾಲಾಗಿತ್ತು.

ಆಸ್ಟ್ರೇಲಿಯಾ(Australia) ಹಿಂದೆ ಸರಿದ ಬೆನ್ನಲ್ಲೇ, ಗುಜರಾತ್‌ನ ಅಹಮದಾಬಾದ್‌(Ahmedabad) ಕ್ರೀಡಾಕೂಟದ ಆತಿಥ್ಯದ ಹಕ್ಕಿಗೆ ಬಿಡ್‌ ಸಲ್ಲಿಸುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ಗುಜರಾತ್‌ ಸರ್ಕಾರ(gujarat government) ಸ್ಪಷ್ಟನೆ ನೀಡಿ ಈ ವಿಚಾರವನ್ನು ಅಲ್ಲಗಳೆದಿತ್ತು. ಆಸ್ಟ್ರೇಲಿಯಾ ಕಾಮನ್​ವೆಲ್ತ್​ ಗೇಮ್ಸ್​ ಅನ್ನು 5 ಬಾರಿ ಆಯೋಜಿಸಿದೆ. 1938ರಲ್ಲಿ ಸಿಡ್ನಿಯಲ್ಲಿ 1962ರಲ್ಲಿ ಪರ್ತ್​​ನಲ್ಲಿ 1982ರಲ್ಲಿ ಬ್ರಿಸ್ಬೇನ್‌, 2006ರಲ್ಲಿ ವಿಕ್ಟೋರಿಯಾದ ಮೆಲ್ಬೋರ್ನ್​ ಮತ್ತು 2018ರ ಆವೃತ್ತಿ ಗೋಲ್ಡ್​ಕಾಸ್ಟ್​​ನಲ್ಲಿ ನಡೆದಿತ್ತು.

ಇದನ್ನೂ ಓದಿ IPL 2025: ಆರ್‌ಸಿಬಿ ರಿಟೈನ್‌ ಪಟ್ಟಿ ಅಂತಿಮ; ಕೊಹ್ಲಿ ಮೊದಲ ಆಯ್ಕೆ

2022ರ ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ನಲ್ಲಿ ಒಟ್ಟು 19 ಕ್ರೀಡಾ ವಿಭಾಗಗಳಿದ್ದವು. ಇದನ್ನು 10ಕ್ಕೆ ಸೀಮಿತಗೊಳಿಸುವುದು ಗ್ಲಾಸ್ಗೋ ಗೇಮ್ಸ್‌ ಸಂಘಟಕರ ಉದ್ದೇಶವಾಗಿದೆ. ಒಂದೊಮ್ಮೆ ಹಾಕಿ ಕೈಬಿಟ್ಟರೆ ಆಗ
ಭಾರತ, ಆಸ್ಟ್ರೇಲಿಯ ತಂಡಗಳಿಗೆ ಭಾರೀ ನಷ್ಟವಾಗಲಿದೆ. ಏಕೆಂದರೆ ಈ ಕ್ರೀಡಾಕೂಟದಲ್ಲಿ ಭಾರತದ ಪುರುಷರ ತಂಡ ಈವರೆಗೆ 5 ಪದಕ ಗೆದ್ದಿದ್ದಾರೆ. ಇದರಲ್ಲಿ 3 ಬೆಳ್ಳಿ, 2 ಕಂಚು ಒಳಗೊಂಡಿದೆ. ಮಹಿಳಾ ತಂಡ 3 ಪದಕ ಗೆದ್ದಿದೆ. ಇದರಲ್ಲಿ ಒಂದು ಚಿನ್ನ ಒಳಗೊಂಡಿದೆ. 2000ದ ಆವೃತ್ತಿಯ ಚಿನ್ನ ಒಲಿದಿತ್ತು. ಆಸ್ಟ್ರೇಲಿಯಾ ಪುರುಷರ ತಂಡ ದಾಖಲೆಯ 7 ಬಾರಿ ಚಿನ್ನ ಗೆದ್ದಿದ್ದರೆ, ಮಹಿಳಾ ತಂಡ 4 ಸಲ ಚಾಂಪಿಯನ್‌ ಆಗಿದೆ. ಹಾಕಿ ಕೈಬಿಟ್ಟರೆ ಉಭಯ ತಂಡಗಳಿಗೂ ಪದಕ ಗೆಲ್ಲುವ ಅವಕಾಶವೊಂದು ಕೈತಪ್ಪಲಿದೆ. ಇನ್ನೆರಡು ದಿನಗಳಲ್ಲಿ ಇದರ ಪರಿಪೂರ್ಣ ಚಿತ್ರಣ ಸಿಗುವ ಸಾಧ್ಯತೆ ಇದೆ.