Thursday, 12th December 2024

CPL 2024: ಮೆಸ್ಸಿ ಶೈಲಿಯಲ್ಲಿ ಟ್ರೋಫಿ ಎತ್ತಿ ಸಂಭ್ರಮಿಸಿದ​ ಡು ಪ್ಲೆಸಿಸ್; ವಿಡಿಯೊ ವೈರಲ್​

ಭಾನುವಾರ ತಡರಾತ್ರಿ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್​ನ(CPL 2024) 12ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಮಾಲೀಕತ್ವದ ಸೇಂಟ್ ಲೂಸಿಯಾ ಕಿಂಗ್ಸ್(Saint Lucia Kings) ಚಾಂಪಿಯನ್ ಪಟ್ಟ ಅಲಂಕರಿಸಿತು. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡ 6 ವಿಕೆಟ್‌ ಅಂತರದಿಂದ ಗಯಾನಾ ಅಮೆಝಾನ್ ವಾರಿಯರ್ಸ್‌ಗೆ(Guyana Amazon Warriors) ಸೋಲುಣಿಸಿತು. ಕಪ್‌ ಎತ್ತಿ ಹಿಡಿಯಿವ ವೇಳೆ ಸೇಂಟ್ ಲೂಸಿಯಾ ತಂಡದ ಆಟಗಾರರು ಸಂಭ್ರಮಿಸಿದ ವಿಡಿಯೊ ವೈರಲ್‌ ಆಗಿದೆ.

2022 ಕತಾರ್​ನಲ್ಲಿ ನಡೆದ ಫಿಫಾ ಫುಟ್ಬಾಲ್​​​​​​​​​ ವಿಶ್ವ ಕಪ್(Fifa World Cup 2022) ರೋಮಾಂಚನಕಾರಿ ಫೈನಲ್​ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ(Lionel Messi) ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್​ ತಂಡವನ್ನು ಮಣಿಸಿ 36 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಆಗಿ ಹೊರಮೊಮ್ಮಿತ್ತು. ಲಿಯೋನೆಲ್ ಮೆಸ್ಸಿ ಅವರು ವಿಭಿನ್ನ ಶೈಲಿಯಲ್ಲಿ ಬಂದು ಕಪ್​ ಎತ್ತಿ ಹಿಡಿಯುವ ಮೂಲಕ ಫೋಟೊಗೆ ಫೋಸ್​ ಕೊಟ್ಟಿದ್ದರು. ಅಂದಿನಿಂದ ಯಾವುದೇ ಟೂರ್ನಿ ನಡೆದರೂ ಚಾಂಪಿಯನ್‌ ತಂಡ ಮೆಸ್ಸಿ ಮತ್ತು ತಂಡದ ಆಟಗಾರರ ಸಂಭ್ರಮಿಸಿದ ಶೈಲಿಯಲ್ಲೇ ಸಂಭ್ರಮಾಚರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ Viral Video: ಮೂಗಿನ ಕೂದಲು ಕೀಳುವುದು ಆಗುವ ನಷ್ಟವೇನು? ವಿಡಿಯೊದಲ್ಲಿದೆ ಎಲ್ಲ ವಿವರ

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ವೇಳೆ ಭಾರತ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಕೂಡ ಮೆಸ್ಸಿಯ ಶೈಲಿಯಲ್ಲೇ ವಿಶ್ವಕಪ್​ ಎತ್ತಿ ಸಂಭ್ರಮಿಸಿದ್ದರು. ಇದೀಗ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್‌ ಮತ್ತು ಸಹ ಆಟಗಾರರು ಇದೇ ರೀತಿ ಸಂಭ್ರಮಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಐಪಿಎಲ್​ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ಪಂಜಾಬ್ ಕಿಂಗ್ಸ್, ಕೆರಿಬಿಯನ್‌ ಲೀಗ್‌ನಲ್ಲಿ ಕಪ್‌ ಗೆಲ್ಲುವ ಮೂಲಕ ಚೊಚ್ಚಲ ಕಪ್‌ ಒಂದನ್ನು ಗೆದ್ದ ಸಾಧನೆ ಮಾಡಿದೆ. ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗಯಾನಾ ಅಮೆಝಾನ್ ವಾರಿಯರ್ಸ್‌ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ ಕೇವಲ 138 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸೇಂಟ್ ಲೂಸಿಯಾ ಕಿಂಗ್ಸ್ 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 139 ರನ್‌ ಬಾರಿಸಿ ಗೆಲುವು ಸಾಧಿಸಿತು.

ಅಂದು ಮೆಸ್ಸಿ ಸಂಭ್ರಮಿಸಿದ ಕ್ಷಣ