Friday, 13th December 2024

ಜನಾಂಗೀಯ ನಿಂದನೆ ಪ್ರಕರಣ: ಕ್ಷಮೆ ಕೋರಿದ ಕ್ರಿಕೆಟ್‌ ಆಸ್ಟ್ರೇಲಿಯಾ

ಸಿಡ್ನಿ: ಟೀಂ ಇಂಡಿಯಾ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ಪ್ರಕರಣ ಸಂಬಂಧ ಕ್ರಿಕೆಟ್‌ ಆಸ್ಟ್ರೇಲಿಯಾ(ಸಿಎ) ಭಾರತ ತಂಡಕ್ಕೆ ಕ್ಷಮೆಯಾಚಿಸಿದೆ.

ಶನಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರರಾದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರಿಗೆ ಕುಡಿದ ಮತ್ತಿನಲ್ಲಿದ್ದ ಪ್ರೇಕ್ಷಕನೊಬ್ಬ ಜನಾಂಗೀಯ ನಿಂದನೆ ಮಾಡಿದ್ದನು.

ಪ್ರಕರಣ ಸಂಬಂಧ ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ದೂರು ನೀಡಿತ್ತು. ಇದೀಗ ಘಟನೆ ಸಂಬಂಧ ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರತಿಕ್ರಿಯಿಸಿದೆ.

ಸಿಡ್ನಿ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕನೊಬ್ಬ ಮೊಹಮ್ಮದ್ ಸಿರಾಜ್ ಅವರನ್ನು ‘ಕೋತಿ’ ಎಂದು ನಿಂದಿಸಿದ್ದ.

ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರಿಗೆ ಪ್ರೇಕ್ಷಕನಿಂದ ಜನಾಂಗೀಯ ನಿಂದನೆ ಘಟನೆ ಕುರಿತಂತೆ, ದಿನದ ಆಟದ ಕೊನೆಯಲ್ಲಿ ನಾಯಕ ಅಜಿಂಕ್ಯ ರಹಾನೆ ಸೇರಿದಂತೆ ತಂಡದ ಸದಸ್ಯರು ಅಂಪೈರ್‌ಗಳು ಮತ್ತು ಭದ್ರತಾ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ್ದರು.

ಭಾರತದ ಈ ಇಬ್ಬರು ಆಟಗಾರರು ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ವ್ಯಕ್ತಿ ನಿಂದನೆ ಮಾಡಿದ್ದಾನೆ.