CSK vs KKR: ಚೆನ್ನೈಗೆ 3ನೇ ಜಯ, ಸೋತ ಕೆಕೆಆರ್ನ ಪ್ಲೇಆಫ್ಸ್ ಹಾದಿ ಕಠಿಣ!
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 57ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು. ಆದರೆ, ಸೋತ ಕೆಕೆಆರ್ ತಂಡದ ಪ್ಲೇಆಫ್ಸ್ ಹಾದಿ ಇನ್ನಷ್ಟು ಕಠಿಣವಾಗಿದೆ.



ಚೆನ್ನೈ ಸೂಪರ್ ಕಿಂಗ್ಸ್ಗೆ 2 ವಿಕೆಟ್ ಜಯ
ನೂರ್ ಅಹ್ಮದ್ (31 ಕ್ಕೆ 4) ಅವರ ಸ್ಪಿನ್ ಮೋಡಿ ಹಾಗೂ ಡೆವಾಲ್ಡ್ ಬ್ರೆವಿಸ್ (52 ರನ್) ಅವರ ಸ್ಪೋಟಕ ಅರ್ಧಶತಕದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ, 2025ರ ಐಪಿಎಲ್ ಟೂರ್ನಿಯ 57ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2 ವಿಕೆಟ್ ಗೆಲುವು ಪಡೆಯಿತು. ಕೆಕೆಆರ್ ನೀಡಿದ್ದ 180 ರನ್ ಗುರಿ ಹಿಂಬಾಲಿಸಿದ ಸಿಎಸ್ಕೆ, 19.4 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿ ಜಯಿಸಿತು.

ಕೆಕೆಆರ್ ಪ್ಲೇಆಫ್ಸ್ ಹಾದಿ ಕಠಿಣ
ಇನ್ನು ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ಲೇಆಫ್ಸ್ ಹಾದಿ ಇನ್ನಷ್ಟು ಕಠಿಣವಾಗಿದೆ. ಇದೀಗ 11 ಅಂಕಗಳನ್ನು ಹೊಂದಿರುವ ಕೆಕೆಆರ್, ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಒಂದು ವೇಳೆ ಗೆದ್ದರೂ ಕೆಕೆಆರ್ನ ನಾಕ್ಔಟ್ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.

ಡೆವಾಲ್ಡ್ ಬ್ರೆವಿಸ್ ಅರ್ಧಶತಕ
180 ರನ್ಗಳ ಗುರಿಯನ್ನು ಹಿಂಬಾಲಿಸಿದ ಸಿಎಸ್ಕೆ ಡೆವಾಲ್ಡ್ ಬ್ರೆವಿಸ್ ಕೇವಲ 25 ಎಸೆತಗಳಲ್ಲಿ 52 ರನ್ ಚಚ್ಚಿದರು. ನಂತರ ಕೆಳೆ ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ 45 ರನ್ ಗಳಿಸಿದರೆ, ಇದಕ್ಕೂ ಮುನ್ನ ಊರ್ವಲ್ ಪಟೇಲ್ ಕೇವಲ 11 ಎಸೆತಗಳಲ್ಲಿ 31 ರನ್ ಸಿಡಿಸಿದ್ದರು.

179 ರನ್ ಕಲೆ ಹಾಕಿದ್ದ ಕೆಕೆಆರ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವಂತಾಗಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ, ನೂರ್ ಅಹ್ಮದ್ ಸ್ಪಿನ್ ಮೋಡಿಯ ಹೊರತಾಗಿಯೂ ಅಜಿಂಕ್ಯ ರಹಾನೆ, ಆಂಡ್ರೆ ರಸೆಲ್ ಹಾಗೂ ಮನೀಷ್ ಪಾಂಡೆ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ 179 ರನ್ಗಳನ್ನು ಕಲೆ ಹಾಕಿತ್ತು.

ಅಜಿಂಕ್ಯ ರಹಾನೆ ಬ್ಯಾಟಿಂಗ್
ಕೆಕೆಆರ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ನಾಯಕ ಅಜಿಂಕ್ಯ ರಹಾನೆ 33 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 48 ರನ್ಗಳನ್ನು ಕಲೆ ಹಾಕಿದರು. ಆದರೆ, ಅರ್ಧಶತಕ ದಂಚಿನಲ್ಲಿ ಅವರು ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.

ಮನೀಷ್ ಪಾಂಡೆ, ರಸೆಲ್ ಮಿಂಚು
ರಹಾನೆ ವಿಕೆಟ್ ಒಪ್ಪಿಸಿದ ಬಳಿಕ ಸ್ಪೋಟಕ ಬ್ಯಾಟ್ ಮಾಡಿದ ಕನ್ನಡಿಗ ಮನೀಷ್ ಪಾಂಡೆ 28 ಎಸೆತಗಳಲ್ಲಿ 36 ರನ್ಗಳನ್ನು ಸಿಡಿಸಿದರೆ, ಆಂಡ್ರೆ ರಸೆಲ್ 21 ಎಸೆತಗಳಲ್ಲಿ 38 ರನ್ಗಳನ್ನು ಸಿಡಿಸಿದರು. ಆ ಮೂಲಕ ಕೆಕೆಆರ್ 150ರ ಗಡಿ ದಾಟಲು ನೆರವು ನೀಡಿದ್ದರು.

ನೂರ್ ಅಹ್ಮದ್ಗೆ 4 ವಿಕೆಟ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ನೂರ್ ಅಹ್ಮದ್ ಸ್ಪಿನ್ ಮೋಡಿ ಮಾಡಿದರು. ಅವರು ಬೌಲ್ ಮಾಡಿದ ನಾಲ್ಕು ಓವರ್ಗಳಲ್ಲಿ 31 ರನ್ ನೀಡಿದರೂ 4 ವಿಕೆಟ್ಗಳನ್ನು ಕಬಳಿಸಿ ಸಿಎಸ್ಕೆ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ರವೀಂದ್ರ ಜಡೇಜಾ ಒಂದು ವಿಕೆಟ್ ಕಿತ್ತರು.