IND vs BAN: ಭಾರತ ತಂಡದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!
India's Tour of Bangladesh: ಆಗಸ್ಟ್ ತಿಂಗಳಲ್ಲಿ ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಬಾಂಗ್ಲಾ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ.

ಭಾರತ ತಂಡದ ಬಾಂಗ್ಲಾ ಪ್ರವಾಸದ ವೇಳಾಪಟ್ಟಿ ಪ್ರಕಟ.

ನವದೆಹಲಿ: ಮುಂಬರುವ ಆಗಸ್ಟ್ ತಿಂಗಳಲ್ಲಿ ಭಾರತ ಕ್ರಿಕೆಟ್ ತಂಡ (India) ಬಾಂಗ್ಲಾದೇಶ (IND vs BAN) ಪ್ರವಾಸ ಕೈಗೊಳ್ಳಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಂಗಳವಾರ ಬಾಂಗ್ಲಾ ಪ್ರವಾಸದ ವೈಟ್ ಬಾಲ್ ಸರಣಿಗಳಿಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆಗಸ್ಟ್ 17 ರಂದು ಬಾಂಗ್ಲಾ ಪ್ರವಾಸ ಆರಂಭವಾಗಲಿದ್ದು, ಆಗಸ್ಟ್ 31 ರಂದು ಅಂತ್ಯವಾಗಲಿದೆ. ಮೊದಲಿಗೆ ಏಕದಿನ ಸರಣಿ ನಡೆಯಲಿದ್ದು, ಆಗಸ್ಟ್ 17, 20 ಹಾಗೂ 23 ರಂದು ಕ್ರಮವಾಗಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ನಂತರ ಟಿ20ಐ ಸರಣಿ ನಡೆಯಲಿದ್ದು, ಆಗಸ್ಟ್ 26, 29 ಹಾಗೂ 31 ರಂದು ಕ್ರಮವಾಗಿ ಮೂರು ಟಿ20ಐ ಪಂದ್ಯಗಳು ನಡೆಯಲಿವೆ.
ಭಾರತ ತಂಡ 2022ರಲ್ಲಿ ಕೊನೆಯ ಬಾರಿ ಬಾಂಗ್ಲಾದೇಶ ಪ್ರವಾಸವನ್ನು ಹಮ್ಮಿಕೊಂಡಿತ್ತು. ಈ ವೇಳೆ 3 ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತ್ತು. ಅಂದ ಹಾಗೆ ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಳಿಕ ಭಾರತ ತಂಡ, ಇಂಗ್ಲೆಂಡ್ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಜೂನ್, ಜುಲೈ ಹಾಗೂ ಆಗಸ್ಟ್ ಅವಧಿಯಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ಆಗಸ್ಟ್ 4 ರಂದು ಅಂತ್ಯವಾಗಲಿದೆ. ಇತ್ತೀದಿನ ದಿನಗಳಲ್ಲಿ ಎಲ್ಲಾ ತಂಡಗಳ ನಡುವೆ ಸಾಮ್ಯತೆ ಇದೆ. ಅಂದರೆ, ಟೆಸ್ಟ್ ತಂಡದಲ್ಲಿ ಆಡುವ ಆಟಗಾರರು ಟಿ20ಐ ತಂಡದಲ್ಲಿ ಆಡುವುದಿಲ್ಲ. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಸಲುವಾಗಿ ಬಿಸಿಸಿಐ ಈ ಕ್ರಮವನ್ನು ಅನುಸರಿಸುತ್ತಿದೆ.
2025-26ರ ಸಾಲಿನ ಭಾರತ ತಂಡದ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತವರು ಸರಣಿಗಳ ವೇಳಾಪಟ್ಟಿ!
ಭಾರತ ತಂಡದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿ
ಏಕದಿನ ಸರಣಿಯ ವೇಳಾಪಟ್ಟಿ
ಮೊದಲನೇ ಏಕದಿನ ಪಂದ್ಯ: ಆಗಸ್ಟ್ 17 (ಭಾನುವಾರ) ಮೀರ್‌ಪುರ್
ಎರಡನೇ ಏಕದಿನ ಪಂದ್ಯ: ಆಗಸ್ಟ್ 20(ಬುಧವಾರ) ಮೀರ್‌ಪುರ್
ಮೂರನೇ ಏಕದಿನ ಪಂದ್ಯ: ಆಗಸ್ಟ್ 23 (ಶನಿವಾರ) ಚಟ್ಟೋಗ್ರಾಮ್
ಟಿ20ಐ ಸರಣಿಯ ವೇಳಾಪಟ್ಟಿ
ಮೊದಲನೇ ಟಿ20ಐ ಪಂದ್ಯ: ಆಗಸ್ಟ್ 26(ಮಂಗಳವಾರ), ಚಟ್ಟೋಗ್ರಾಮ್
ಎರಡನೇ ಟಿ20ಐ ಪಂದ್ಯ: ಆಗಸ್ಟ್ 29 (ಶುಕ್ರವಾರ), ಮೀರ್‌ಪುರ್
ಮೂರನೇ ಟಿ20ಐ ಪಂದ್ಯ: ಆಗಸ್ಟ್ 31 (ಭಾನುವಾರ) ಮೀರ್‌ಪುರ್

ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ಸರಣಿ
ಅಕ್ಟೋಬರ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಭಾರತಕ್ಕೆ ಬರಲಿವೆ. ಈ ಎರಡೂ ಸರಣಿಗಳ ಮೂಲಕ ಭಾರತ ತಂಡದ ತವರು ಆವೃತ್ತಿ ಆರಂಭವಾಗಲಿದೆ. ಅಕ್ಟೋಬರ್ 2 ರಂದು ವೆಸ್ಟ್ ಇಂಡೀಸ್ ವಿರುದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೂಲಕ ಟೀಮ್ ಇಂಡಿಯಾದ ಹೋಂ ಸೀಸನ್ ಅಧಿಕೃತವಾಗಿ ಆರಂಭವಾಗಲಿದೆ. ಈ ಸರಣಿ ಮುಗಿದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20ಐ ಸರಣಿಗಳನ್ನು ಭಾರತ ತಂಡ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಆಡಲಿದೆ.
ನಂತರ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಲಿದೆ. ಈ ವೇಳೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಹಾಘೂ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಈ ತಿಂಗಳ ಆರಂಭದಲ್ಲಿ ಪ್ರಕಟಿಸಿತ್ತು. ಅಕ್ಟೋಬರ್ 19 ರಂದು ಏಕದಿನ ಸರಣಿ ಆರಂಭವಾಗಲಿದ್ದು, ಅಕ್ಟೋಬರ್ 29 ರಂದು ಟಿ20ಐ ಸರಣಿ ಶುರುವಾಗಲಿದೆ.