ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs SRH: ವಾಂಖೆಡೆಯಲ್ಲಿ ಸನ್‌ರೈಸರ್ಸ್‌ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್‌!

MI vs SRH match Highlights: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 33ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಮುಂಬೈ ಇಂಡಿಯನ್ಸ್‌ ತಂಡ 4 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದೆ.

ವಾಂಖೆಡೆಯಲ್ಲಿ ಸನ್‌ರೈಸರ್ಸ್‌ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್‌!

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಮುಂಬೈ ಇಂಡಿಯನ್ಸ್‌ಗೆ ಜಯ.

Profile Ramesh Kote Apr 17, 2025 11:48 PM

ಮುಂಬೈ: ವಿಲ್‌ ಜ್ಯಾಕ್ಸ್‌ (Will Jacks) ಆಲ್‌ರೌಂಡರ್‌ ಆಟದ ಬಲದಿಂದ ಮುಂಬೈ ಇಂಡಿಯನ್ಸ್‌ (Mumbai Indians) ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 33ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ 4 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ ಮೂರನೇ ಗೆಲುವು ಪಡೆಯಿತು ಹಾಗೂ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ, ಟೂರ್ನಿಯಲ್ಲಿ ಐದನೇ ಸೋಲು ಅನುಭವಿಸಿದ ಪ್ಯಾಟ್‌ ಕಮಿನ್ಸ್‌ ತಂಡ 9ನೇ ಸ್ಥಾನದಲ್ಲಿಯೇ ಉಳಿದಿದೆ.

ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ನೀಡಿದ್ದ 163 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್‌ ತಂಡ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿ ಆಟದ ಬಲದಿಂದ 18.1 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 166 ರನ್‌ಗಳನ್ನು ಗಳಿಸಿ ನಾಲ್ಕು ವಿಕೆಟ್‌ಗಳ ಗೆಲುವು ಪಡೆಯಿತು. ಬೌಲಿಂಗ್‌ನಲ್ಲಿ 2 ವಿಕೆಟ್‌ಗಳನ್ನು ಕಬಳಿಸಿದ್ದ ವಿಲ್‌ ಜ್ಯಾಕ್ಸ್‌, ಬ್ಯಾಟಿಂಗ್‌ನಲ್ಲಿಯೂ 36 ರನ್‌ ಗಳಿಸಿ ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IPL 2025: ರಾಜಸ್ಥಾನ್‌ ವಿರುದ್ಧ ಸ್ಲೋ ಬ್ಯಾಟ್‌ ಮಾಡಿದ ಕೆಎಲ್‌ ರಾಹುಲ್‌ ವಿರುದ್ಧ ಗುಡುಗಿದ ಚೇತೇಶ್ವರ್‌ ಪುಜಾರ!

ಚೇಸಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರ ಬ್ಯಾಟ್‌ ಮಾಡಿದ ಎಲ್ಲರೂ ಜವಾಬ್ದಾರಿಯುತ ಆಟವನ್ನು ಆಡಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರಯಾನ್‌ ರಿಕೆಲ್ಟನ್‌ 31 ರನ್‌ ಗಳಿಸಿದರೆ, ರೋಹಿತ್‌ ಶರ್ಮಾ 26 ರನ್‌ ಗಳಿಸಿದ್ದರು. ನಂತರ ಬಂದ ವಿಲ್‌ ಜ್ಯಾಕ್ಸ್‌ 26 ಎಸೆತಗಳಲ್ಲಿ 36 ರನ್‌, ಸೂರ್ಯಕುಮಾರ್‌ ಯಾದವ್‌ 26 ರನ್‌ ಗಳಿಸಿದರು. ತಿಲಕ್‌ ವರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ ತಲಾ 21 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಮುಂಬೈ ಇಂಡಿಯನ್ಸ್‌ ತಂಡ ಯಾವುದೇ ಅಪಾಯವಿಲ್ಲದೆ ಗೆಲುವಿನ ದಡ ಸೇರಿತು.



ಸನ್‌ರೈಸರ್ಸ್‌ ಹೈದರಾಬಾದ್‌ ಪರ ಅತ್ಯುತ್ತಮ ಬೌಲಿಂಗ್‌ ದಾಳಿ ನಡೆಸಿದ ಪ್ಯಾಟ್‌ ಕಮಿನ್ಸ್‌ 3 ವಿಕೆಟ್‌ ಕಿತ್ತರೆ, ಇಶಾನ್‌ ಮಾಲಿಂಗ ಎರಡು ವಿಕೆಟ್‌ಗಳನ್ನು ಕಿತ್ತರು. ಆದರೆ, ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ದೊಡ್ಡ ಮೊತ್ತದ ಗುರಿಯನ್ನು ನೀಡದ ಕಾರಣ ಬೌಲರ್‌ಗಳು ಏನು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆತಿಥೇಯ ಎಸ್‌ಆರ್‌ಎಚ್‌ ಸೋಲು ಅನುಭವಿಸಬೇಕಾಯಿತು.

162 ರನ್‌ ಕಲೆ ಹಾಕಿದ್ದ ಸನ್‌ರೈಸರ್ಸ್‌ ಹೈದಾರಾಬಾದ್‌

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಮುಂಬೈನ ಶಿಸ್ತುಬದ್ದ ಬೌಲಿಂಗ್‌ ದಾಳಿಗೆ ನಲುಗಿ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ವಿಫಲವಾಯಿತು. ಹಾಗಾಗಿ ತನ್ನ ಪಾಲಿನ 20 ಓವರ್‌ಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 5 ವಿಕೆಟ್‌ಗಳ ನಷ್ಟಕ್ಕೆ 162 ರನ್‌ಗಳನ್ನು ಕಲೆ ಹಾಕಿತ್ತು. 28 ಎಸೆತಗಳಲ್ಲಿ 40 ರನ್‌ಗಳನ್ನು ಗಳಿಸಿದ ಆರಂಭಿಕ ಅಭಿಷೇಕ್‌ ಶರ್ಮಾ ಎಸ್‌ಆರ್‌ಎಚ್‌ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.



ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎದುರಾಳಿ ಬೌಲರ್‌ಗಳಿಗೆ ನಡುಕು ಹುಟ್ಟಿಸುವ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ ಹೆಡ್‌ ಮುಂಬೈ ಇಂಡಿಯನ್ಸ್‌ ಬೌಲಿಂಗ್‌ ಎದುರು ತಮ್ಮ ನೈಜ ಆಟವನ್ನು ಹೊರ ಹಾಕುವಲ್ಲಿ ವಿಫಲರಾದರು. 28 ಎಸೆತಗಳಲ್ಲಿ ಅಭಿಷೇಕ್‌ ಶರ್ಮಾ 40 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ಇವರ ಜೊತೆಗಾರ ಅಪಾಯಕಾರಿ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ 29 ಎಸೆತಗಳಲ್ಲಿ 28 ರನ್‌ ಗಳಿಸಿ ವಿಲ್‌ಜ್ಯಾಕ್ಸ್‌ಗೆ ಶರಣಾದರು. ತಮ್ಮ ಮಾಜಿ ತಂಡದ ಎದುರು ಇಶಾನ್‌ ಕಿಶನ್‌ ಕೇವಲ ಎರಡು ರನ್‌ ಗಳಿಸಿ ವಿಲ್‌ಜ್ಯಾಕ್ಸ್‌ಗೆ ವಿಕೆಟ್‌ ಒಪ್ಪಿಸಿದರು.

ನಿತೀಶ್‌ ರೆಡ್ಡಿ 19 ರನ್‌ಗಳಿಗೆ ಸೀಮಿತರಾದರು. ಆದರೆ, ಕೊಂಚ ಕಾಲ ಸ್ಪೋಟಕ ಬ್ಯಾಟ್‌ ಮಾಡಿದ್ದ ಹೆನ್ರಿಚ್‌ ಕ್ಲಾಸೆನ್‌ 28 ಎಸೆತಗಳಲ್ಲಿ 37 ರನ್‌ ಗಳಿಸಿದರು. ಆದರೆ, ಇವರನ್ನು ಜಸ್‌ಪ್ರೀತ್‌ ಬುಮ್ರಾ ಸರಿಯಾದ ಸಮಯದಲ್ಲಿ ಬೌಲ್ಡ್‌ ಮಾಡಿದರು. ಆ ಮೂಲಕ ಎಸ್‌ಆರ್‌ಎಚ್‌ ತಂಡದ ರನ್‌ಗಳಿಗೆ ಕಡಿವಾಣ ಹಾಕಿದರು.ಕೊನೆಯಲ್ಲಿ ಅನಿಕೇತ್‌ ವರ್ಮಾ ಕೇವಲ 8 ಎಸೆತಗಳಲ್ಲಿ ಅಜೇಯ 18 ಸಿಡಿಸಿದರೆ, ನಾಯಕ ಪ್ಯಾಟ್‌ ಕಮಿನ್ಸ್‌ 8 ರನ್‌ ಗಳಿಸಿದರು.



ಮುಂಬೈ ಇಂಡಿಯನ್ಸ್‌ ಪರ ದೀಪಕ್‌ ಚಹರ್‌ ಹಾಗೂ ಹಾರ್ದಿಕ್‌ ಪಾಂಡ್ಯ 10ಕ್ಕೂ ಅಧಿಕ ಎಕಾನಮಿಯಲ್ಲಿ ರನ್‌ ಬಿಟ್ಟು ಕೊಟ್ಟಿದ್ದು ಬಿದ್ದರೆ, ಇನ್ನುಳಿದ ಎಲ್ಲಾ ಬೌಲರ್‌ಗಳು ಅತ್ಯುತ್ತಮ ಎಕಾನಮಿಯಲ್ಲಿ ಬೌಲ್‌ ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ವಿಲ್‌ ಜ್ಯಾಕ್ಸ್‌ 3 ಓವರ್‌ಗಳಿಗೆ ಕೇವಲ 14 ರನ್‌ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಿತ್ತರು.