ವಡೋದರ: ಅಶಿಸ್ತಿನಿಂದ ವರ್ತಿಸಿದ ಅನುಭವಿ ಆಟಗಾರ ದೀಪಕ್ ಹೂಡಾ ಅವರನ್ನು ಬರೋಡಾ ಕ್ರಿಕೆಟ್ ಸಂಸ್ಥೆ (ಬಿಸಿಎ) ಒಂದು ವರ್ಷದ ಮಟ್ಟಿಗೆ ಅಮಾನತುಗೊಳಿಸಿದೆ.
ಸೈಯದ್ ಮುಷ್ತಾಖ್ ಅಲಿ ಟಿ20 ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ತಂಡದ ನಾಯಕ ಕೃಣಾಲ್ ಪಾಂಡ್ಯ ಜತೆ ಮಾತಿನ ಜಟಾಪಟಿ ನಡೆಸಿದ ಉಪನಾಯಕ ದೀಪಕ್ ಹೂಡಾ ಸಿಟ್ಟಿನಿಂದ ತಂಡ ತೊರೆದು ಅಶಿಸ್ತು ಪ್ರದರ್ಶಿಸಿದ್ದರು. ಹೂಡಾ ಅವರ ಈ ವರ್ತನೆ ಬರೋಡಾ ಕ್ರಿಕೆಟ್ ಮಂಡಳಿಯ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಸಕ್ತ ದೇಶೀಯ ಕ್ರಿಕೆಟ್ ಋತುವಿಗೆ ದೀಪಕ್ ಹೂಡಾ ಅವರನ್ನು ಪರಿಗಣಿಸಲಾಗದು. ಅವರಿಗೆ ಒಂದು ವರ್ಷ ನಿಷೇಧ ಹೇರಲು ಅಪೆಕ್ಸ್ ಕೌನ್ಸಿಲ್ ನಿರ್ಧರಿಸಿದೆ. ಘಟನೆಯ ಬಗ್ಗೆ ತಂಡದ ವ್ಯವಸ್ಥಾಪಕ ಮತ್ತು ತರಬೇತುದಾರರ ವರದಿಗಳು ಹಾಗೂ ಹೂಡಾ ಅವರೊಂದಿಗಿನ ಮಾತುಕತೆಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಬರೋಡಾ ಕ್ರಿಕೆಟ್ ಮಂಡಳಿ ಹೇಳಿದೆ. 2021-22ರ ಸಾಲಿನಿಂದ ಹೂಡಾ ಮತ್ತೆ ಆಡಬಹುದಾಗಿದೆ ಎಂದು ಬಿಸಿಎನ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಮುಖ್ಯಸ್ಥ ಸತ್ಯಜಿತ್ ಗಾಯಕ್ವಾಡ್ ಹೇಳಿದ್ದಾರೆ.