ಬೆಂಗಳೂರು: ಕ್ರಿಕೆಟ್ ಮೈದಾನಕ್ಕೆ ಹಸುಗಳು ನುಗ್ಗಿ ಪಿಚ್ ಹಾಳು ಮಾಡಿದ ಕಾರಣ ಪಂದ್ಯ ಕ್ಯಾನ್ಸಲ್ ಆದ ಪ್ರಸಂಗ ವೆಸ್ಟ್ ಇಂಡೀಸ್ನಲ್ಲಿ ನಡೆದಿದೆ.
ಟ್ರಿನಿಡಾಡ್ ಆಯಂಡ್ ಟೊಬಾಗೊ ಮತ್ತು ಗಯಾನಾ ತಂಡಗಳ ನಡುವಿನ ವೆಸ್ಟ್ ಇಂಡೀಸ್ ದೇಶೀಯ ಕ್ರಿಕೆಟ್ ಚಾಂಪಿಯನ್ಶಿಪ್ ಪಂದ್ಯದ ವೇಳೆ ಹಸುಗಳು ಕ್ರಿಕೆಟ್ ಮೈದಾನದ ಒಂದು ಭಾಗವನ್ನು ಹಾನಿಗೊಳಿಸಿದ್ದವು.
ಹೀಗಾಗಿ ಒಂದು ದಿನದ ಆಟವನ್ನು ರದ್ದುಪಡಿಸಿದರು. ಕೊನಾರಿಯ ಕೊನಾರಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ನಾಲ್ಕು ದಿನಗಳ ಪಂದ್ಯದಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊ ತಂಡ ಗಯಾನಾ ಹ್ಯಾಪಿ ಈಗಲ್ಸ್ ತಂಡವನ್ನು ಎದುರಿಸುತ್ತಿತ್ತು. ಹಸುಗಳು ರಾತ್ರೋರಾತ್ರಿ ಮೈದಾನಕ್ಕೆ ಬಂದು ಪಿಚ್ ಮತ್ತು ಮೈದಾನದ ಹೆಚ್ಚಿನ ಭಾಗವನ್ನು ಹಾನಿಗೊಳಿಸಿದ್ದವು. ಹೀಗಾಗಿ ಪಂದ್ಯವನ್ನು 2 ನೇ ದಿನದಂದು ರದ್ದುಪಡಿಸಲಾಯಿತು.
ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ಸಮಯದಲ್ಲಿ, ಪ್ರವಾಸಿ ತಂಡಕ್ಕೆ ಊಟ ಲೇಟಾಗಿ ಬಂದ ಕಾರಣ ಎರಡನೇ ಸೆಷನ್ ಆಟವನ್ನು ಸ್ಥಗಿತಗೊಳಿಸಲಾಗಿತ್ತು.
1996 ರ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ಅತ್ಯಂತ ಭಯಾನಕ ಘಟನೆ ನಡೆದಿದ್ದು, ಈಡನ್ ಗಾರ್ಡನ್ಸ್ನಲ್ಲಿ ಪ್ರೇಕ್ಷಕರು ಮೈದಾನದಲ್ಲಿ ಆಟಗಾರರ ಮೇಲೆ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿದ್ದರು. ಹೀಗಾಗಿ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು ಮತ್ತು ಶ್ರೀಲಂಕಾ ಪಂದ್ಯವನ್ನು ಗೆದ್ದಿತು.