Thursday, 3rd October 2024

ಕಾಮನ್ವೆಲ್ತ್​ ಗೇಮ್ಸ್​: ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಇಂಗ್ಲೆಂಡ್​ ನಲ್ಲಿ ವೇದಿಕೆ ಸಿದ್ಧ

ಬರ್ಮಿಂಗ್​ಹ್ಯಾಂ: ಕರೋನಾ ವೈರಸ್​ ಹಾವಳಿಯ ನಡುವೆ ಟೋಕಿಯೊ ಒಲಿಂಪಿಕ್ಸ್​ ಆಯೋಜನೆಯ ಬಳಿಕ ಮತ್ತೊಂದು ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಇಂಗ್ಲೆಂಡ್​ ನಲ್ಲಿ ವೇದಿಕೆ ಸಿದ್ಧ ಗೊಂಡಿದ್ದು, ಗುರುವಾರ ನಡೆಯಲಿರುವ ವರ್ಣರಂಜಿತ ಸಮಾರಂಭದೊಂದಿಗೆ 12 ದಿನಗಳ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ.

ಇತ್ತೀಚೆಗಿನ ಕಾಮನ್ವೆಲ್ತ್​ ಗೇಮ್ಸ್​ ಆವೃತ್ತಿಗಳಲ್ಲಿ ಭರ್ಜರಿ ನಿರ್ವಹಣೆಯೊಂದಿಗೆ ಮಿಂಚುತ್ತಿದ್ದ ಭಾರತ ಈ ಬಾರಿ ಶೂಟಿಂಗ್​ ಸ್ಪರ್ಧೆ ಇಲ್ಲದೆ ಹಿನ್ನಡೆ ಎದುರಿಸಿದೆ. ಕುಸ್ತಿ, ಬಾಕ್ಸಿಂಗ್​, ವೇಟ್​ಲಿಫ್ಟಿಂಗ್​, ಬ್ಯಾಡ್ಮಿಂಟನ್​, ಅಥ್ಲೆಟಿಕ್ಸ್​, ಟೇಬಲ್​ ಟೆನಿಸ್​ ನಲ್ಲಿ ಹೆಚ್ಚಿನ ಪದಕ ಬಾಚಿಕೊಳ್ಳುವತ್ತ ಭಾರತ ಗಮನ ಹರಿಸಲಿದೆ.

111 ಪುರುಷರು ಮತ್ತು 104 ಮಹಿಳೆಯರ ಸಹಿತ ಭಾರತ ಒಟ್ಟು 215 ಕ್ರೀಡಾಪಟುಗಳ ತಂಡದೊಂದಿಗೆ ಕಣಕ್ಕಿಳಿಯಲಿದ್ದು, 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ದೆಹಲಿ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ 38 ಚಿನ್ನ, 27 ಬೆಳ್ಳಿ, 36 ಕಂಚಿನ ಸಹಿತ 101 ಪದಕ ಜಯಿಸಿದ್ದು ಕೂಟದ ಇತಿಹಾಸದಲ್ಲಿ ಭಾರತದ ಸರ್ವಶ್ರೇಷ್ಠ ನಿರ್ವಹಣೆಯಾಗಿದೆ.

2018ರ ಗೋಲ್ಡ್​ಕೋಸ್ಟ್​ ಗೇಮ್ಸ್​ನಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಸಹಿತ ಒಟ್ಟು 66 ಪದಕ ಜಯಿಸಿತ್ತು. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್​ನಲ್ಲಿ 1 ಚಿನ್ನ, 2 ಬೆಳ್ಳಿ, 4 ಕಂಚಿನ ಸಹಿತ 7 ಪದಕ ಗೆದ್ದಿದ್ದ ಶ್ರೇಷ್ಠ ನಿರ್ವಹಣೆ ಭಾರತಕ್ಕೆ ಸ್ಫೂರ್ತಿ ತುಂಬಿದೆ.

22ನೇ ಕಾಮನ್ವೆಲ್ತ್​ ಗೇಮ್ಸ್​
72 ದೇಶಗಳು
5,054 ಕ್ರೀಡಾಪಟುಗಳು
20 ಕ್ರೀಡೆಗಳು
280 ಸ್ವರ್ಣ ಸ್ಪರ್ಧೆಗಳು
12 ದಿನಗಳು
15 ಕ್ರೀಡಾಂಗಣಗಳು
215 ಭಾರತದ ಸ್ಪರ್ಧಿಗಳು

ಪಿವಿ ಸಿಂಧು ಧ್ವಜಧಾರಿ: ನೀರಜ್​ ಚೋಪ್ರಾ ಗೈರಿನಲ್ಲಿ ಒಲಿಂಪಿಕ್ಸ್​ ಅವಳಿ ಪದಕ ವಿಜೇತ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧುಗೆ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಅವಕಾಶ ಒಲಿದಿದೆ. 2018ರ ಗೋಲ್ಡ್​ ಕೋಸ್ಟ್​ ಕಾಮನ್ವೆಲ್ತ್​ ಗೇಮ್ಸ್​ನಲ್ಲೂ ಅವರು ಭಾರತದ ಧ್ವಜಧಾರಿಯಾಗಿದ್ದರು. ಆರಂಭೋತ್ಸವದ ಪಥ ಸಂಚಲನ ದಲ್ಲಿ ಭಾರತದಿಂದ ಗರಿಷ್ಠ 164 ಮಂದಿ ಭಾಗವಹಿಸಲು ಅವಕಾಶ ಲಭಿಸಿದೆ.

ಪ್ರತಿ 4 ವರ್ಷಕ್ಕೊಮ್ಮೆ ಆಯೋಜನೆಯಾಗುವ ಕಾಮನ್ವೆಲ್ತ್​ ಗೇಮ್ಸ್​ ಮೊದಲು ಆರಂಭ ವಾಗಿದ್ದು 1930ರಲ್ಲಿ. ಬ್ರಿಟಿಷ್​ ವಸಾಹತುಗಳಾಗಿದ್ದ ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತವೆ. ಸದ್ಯ 52 ಸದಸ್ಯ ರಾಷ್ಟ್ರಗಳಿದ್ದು ಕೂಟದಲ್ಲಿ 72 ದೇಶಗಳು ಭಾಗ ವಹಿಸುತ್ತಿವೆ.

ಕೆನಡದ ಹ್ಯಾಮಿಲ್ಟನ್​ನಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟ ನಡೆದಿತ್ತು. 1930ರಿಂದ 1950ರವರೆಗೆ ಕೂಟವನ್ನು ಬ್ರಿಟಿಷ್​ ಎಂಪೈರ್​ ಗೇಮ್ಸ್​, 1954ರಿಂದ 66ರವರೆಗೆ ಬ್ರಿಟಿಷ್​ ಎಂಪೈರ್​ ಮತ್ತು ಕಾಮನ್ವೆಲ್ತ್​ ಗೇಮ್ಸ್​, 1970ರಿಂದ 74ರವರೆಗೆ ಬ್ರಿಟಿಷ್​ ಕಾಮನ್ವೆಲ್ತ್​ ಗೇಮ್ಸ್​ ಎಂದು ಕರೆಯಲಾಗುತ್ತಿತ್ತು. 1978ರಿಂದ ಕಾಮನ್ವೆಲ್ತ್​ ಗೇಮ್ಸ್​ ಎನ್ನುವ ಹೆಸರಿನಿಂದ ಕೂಟ ಗುರುತಿಸಿಕೊಂಡಿದೆ.

ಅಲೆಕ್ಸಾಂಡರ್​ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ವರ್ಣರಂಜಿತ ಸಮಾರಂಭದೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ.

3ನೇ ಬಾರಿ ಇಂಗ್ಲೆಂಡ್​ ಆತಿಥ್ಯ: ಇಂಗ್ಲೆಂಡ್​ ಆತಿಥ್ಯದಲ್ಲಿ ಇದು 3ನೇ ಕಾಮನ್ವೆಲ್ತ್​ ಗೇಮ್ಸ್​ ಆಗಿದೆ. ಈ ಮುನ್ನ 1934 (ಲಂಡನ್​) ಮತ್ತು 2002ರಲ್ಲಿ (ಮ್ಯಾಂಚೆಸ್ಟರ್​) ನಡೆದಿತ್ತು. ಕಳೆದ 2 ದಶಕಗಳಲ್ಲಿ ಬ್ರಿಟನ್​ನಲ್ಲಿ ಇದು 3ನೇ ಗೇಮ್ಸ್​ ಆಗಿದೆ. 2014ರಲ್ಲಿ ಸ್ಕಾಟ್ಲೆಂಡ್​ನ ಗ್ಲಾಸ್ಗೋದಲ್ಲಿ ನಡೆದಿತ್ತು. ಇನ್ನು ಕಳೆದ 2 ದಶಕಗಳಲ್ಲಿ ಬ್ರಿಟನ್​&ಆಸ್ಟ್ರೆಲಿಯಾ ಹೊರತಾಗಿ ಭಾರತ (2010) ಮಾತ್ರ ಈ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದೆ. ಮೂಲ ಯೋಜನೆಯ ಪ್ರಕಾರ ದಣ ಆಫ್ರಿಕಾದ ಡರ್ಬನ್​ನಲ್ಲಿ ಈ ಕ್ರೀಡಾಕೂಟ ನಡೆಯಬೇಕಾಗಿತ್ತು. ಆರ್ಥಿಕ ಬಿಕ್ಕಟ್ಟಿನಿಂದಾಗಿ ಡರ್ಬನ್​ 2017ರಲ್ಲೇ ಹಿಂದೆ ಸರಿದಿತ್ತು.