ಸಿಂಗಾಪುರ: ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆದ 2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ (World Chess Championship 2024)ನಲ್ಲಿ ಜಯಗಳಿಸುವ ಮೂಲಕ ಭಾರತದ 18 ವರ್ಷದ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್ (D Gukesh) ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಚೆಸ್‌ನ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಗುರುವಾರ (ಡಿ. 12) ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್‌ನ ಹಣಾಹಣಿಯಲ್ಲಿ ಗುಕೇಶ್ ಅವರು ಕಳೆದ ಬಾರಿಯ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ (Ding Liren)ಗೆ ಚೆಕ್ ಮೇಟ್ ನೀಡುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದರು. ಪಂದ್ಯ ಸುಮಾರು 5 ಗಂಟೆಗಳ ಕಾಲ ನಡೆದು ಅಂತಿಮವಾಗಿ ಗುಕೇಶ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ವಿಶ್ವನಾಥನ್ ಆನಂದ್ ಬಳಿಕ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದ 2ನೇ ಭಾರತೀಯ ಆಟಗಾರರಾದರು.
WE HAVE A NEW WORLD CHAMPION! ♟️ 🔥 🏆
— International Chess Federation (@FIDE_chess) December 12, 2024
Congratulations Gukesh D 🇮🇳! 👏 👏#DingGukesh pic.twitter.com/W4w2dE0C36
15 ದಿನಗಳ ಕಾಲ ನಡೆದ ಈ ವಿಶ್ವ ಚೆಸ್ ಪಂದ್ಯಾವಳಿಯಲ್ಲಿ 18 ವರ್ಷದ ಗುಕೇಶ್ ಮತ್ತು 32 ವರ್ಷದ ಡಿಂಗ್ ಲಿರೆನ್ ಮಧ್ಯೆ ಪ್ರಬಲ ಪೈಪೋಟಿ ಕಂಡು ಬಂತು. 13 ಸುತ್ತುಗಳಲ್ಲಿ ಇಬ್ಬರೂ ತಲಾ 2 ಪಂದ್ಯ ಗೆದ್ದಿದ್ದರೆ ಉಳಿದ 9 ಪಂದ್ಯಗಳು ಡ್ರಾ ಆಗಿದ್ದವು. ಆದ್ದರಿಂದ ಗುರುವಾರದ ಪಂದ್ಯದ ಮೊದಲು ಇಬ್ಬರ ಅಂಕ ತಲಾ 6.5 ಆಗಿತ್ತು. ಹೀಗಾಗಿ ವಿಶ್ವ ಚಾಂಪಿಯನ್ ಅನ್ನು ನಿರ್ಣಯಿಸುವ ಗುರುವಾರದ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಒಂದು ವೇಳೆ ಈ ಪಂದ್ಯವೂ ಡ್ರಾ ಆಗಿದ್ದರೆ ಇಬ್ಬರೂ ತಲಾ 7 ಅಂಕ ಗಳಿಸಿರುತ್ತಿದ್ದರು. ಆಗ ಶುಕ್ರವಾರ ಟೈಬ್ರೇಕರ್ ಮೂಲಕ ಚಾಂಪಿಯನ್ ಯಾರೆಂದು ನಿರ್ಧರಿಸಬೇಕಿತ್ತು. ಆದರೆ ಅಂತಿಮವಾಗಿ ಗುಕೇಶ್ 7.5- 6.5 ಅಂಕಗಳ ಅಂತರದಿಂದ ಗೆದ್ದು ಪ್ರಶಸ್ತಿ ಬಾಚಿಕೊಂಡರು.
ಅತಿ ಕಿರಿಯ ಚಾಂಪಿಯನ್
18 ವರ್ಷ 8 ತಿಂಗಳು ಮತ್ತು 14 ದಿನಗಳ ಗುಕೇಶ್ ಇದೀಗ ಅತಿ ಕಿರಿಯ ಚಾಂಪಿಯನ್ ಆಗಿ ಇತಿಹಾಸ ಬರೆದಿದ್ದಾರೆ. ಇದುವರೆಗೆ ಈ ದಾಖಲೆ ರಷ್ಯಾದ ಗ್ಯಾರಿ ಕಾಸ್ಪರೋವ್ ಅವರು ಹೆಸರಿನಲ್ಲಿತ್ತು. 1985ರಲ್ಲಿ ಅನಾಟೊಲಿ ಕಾರ್ಪೋವ್ ಅವರನ್ನು ಸೋಲಿಸುವ ಮೂಲಕ 22ನೇ ವಯಸ್ಸಿನಲ್ಲಿ ಅವರು ಪ್ರಶಸ್ತಿ ಬಾಚಿಕೊಂಡಿದ್ದರು. ಇದೀಗ 39 ವರ್ಷಗಳ ಈ ದಾಖಲೆ ಛಿದ್ರವಾಗಿದೆ.
ಗುಕೇಶ್ ಹಿನ್ನೆಲೆ
ಗುಕೇಶ್ ಅವರ ಪೂರ್ಣ ಹೆಸರು ಗುಕೇಶ್ ದೊಮ್ಮರಾಜು. ಇವರು 2006ರ ಮೇ 29ರಂದು ತಮಿಳುನಾಡಿನ ಚೆನ್ನೈಯಲ್ಲಿ ಜನಿಸಿದರು. ಆಂಧ್ರ ಪ್ರದೇಶದ ಮೂಲದ ಇವರ ಕುಟುಂಬ ಚೆನ್ನೈಯಲ್ಲಿ ನೆಲೆಸಿದೆ. ಇವರ ತಂದೆ ಡಾ.ರಜನಿಕಾಂತ್ ಮತ್ತು ತಾಯಿ ಡಾ. ಪದ್ಮಾ. 7ನೇ ವಯಸ್ಸಿನಲ್ಲಿ ಗುಕೇಶ್ ಚೆಸ್ ಆಡಲು ಆರಂಭಿಸಿದರು. ಗುಕೇಶ್ 2015ರಲ್ಲಿ FIDE ಮಾಸ್ಟರ್ ಟೈಟಲ್ ತಮ್ಮದಾಗಿಸಿಕೊಂಡರು. 2019ರ ಜನವರಿ 15ರಂದು ದಿಲ್ಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಓಪನ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿಯನ್ನು ಬಾಚಿಕೊಂಡರು.
ಈ ಸುದ್ದಿಯನ್ನೂ ಓದಿ: Virat Kohli: ಆಸ್ಟ್ರೇಲಿಯಾದಲ್ಲಿ ವಿಶೇಷ ದಾಖಲೆಯ ಮೇಲೆ ವಿರಾಟ್ ಕೊಹ್ಲಿ ಕಣ್ಣು!