Saturday, 14th December 2024

D Gukesh: ಗುಕೇಶ್​ ಎಂದರೆ ಏನರ್ಥ? ಈ ಹೆಸರಿಡಲು ಕಾರಣವೇನು?

ಬೆಂಗಳೂರು: ಚೀನಾದ ಡಿಂಗ್‌ ಲಿರೆನ್‌ ಅವರನ್ನು ಮಣಿಸುವ ಮೂಲಕ 18 ವರ್ಷದ ಗ್ರಾಂಡ್​ ಮಾಸ್ಟರ್ ​ ಡಿ. ಗುಕೇಶ್(D Gukesh) ಅವರು ಅತಿ ಕಿರಿಯ ವಿಶ್ವ ಚೆಸ್​ ಚಾಂಪಿಯನ್ ಮತ್ತು ಎರಡನೇ ಭಾರತೀಯರೆಂಬ ದಾಖಲೆ ಬರೆದಿದ್ದರು. ಇದೀಗ ಅವರ ಹೆಸರಿನ ಅರ್ಥ ಏನೆಂದು ತಿಳಿದುಕೊಳ್ಳಲು ನೆಟ್ಟಿಗರು ಕುತೂಹಲಗೊಂಡಿದ್ದಾರೆ.

ಗುಕೇಸ್​ ಎಂದರೆ ಸದ್ಗುಣ, ಶಿವ ಅಥವಾ ಜಗತ್ತನ್ನೇ ಗೆದ್ದವನು ಎಂದರ್ಥ. ಮಗನಿಗೆ ‘ಜಿ’ ಅಥವಾ ‘ಗು’ ನಿಂದ ಆರಂಭವಾಗುವ ಅಕ್ಷರದ ಹೆಸರಿಡಲು ಜ್ಯೋತಿಷಿ ಸೂಚಿಸಿದ್ದರಂತೆ, ಅದರಂತೆ ಅವರ ಪೋಷಕರು ಈ ವಿಶೇಷ ಹೆಸರನ್ನು ಆಯ್ದುಕೊಂಡರಂತೆ. ಅವರ ಪೂರ್ಣ ಹೆಸರು ದೊಮ್ಮರಾಜು ಗುಕೇಶ್. ಮಗನ ಚೆಸ್​ ಕನಸು ನನಸಾಗಿಸುವ ಸಲುವಾಗಿ ತಂದೆ ರಜನಿಕಾಂತ್​ ವೈದ್ಯ ವೃತ್ತಿಯನ್ನೇ ತೊರೆದು ಮಗನೊಂದಿಗೆ ವಿವಿಧ ಚೆಸ್​ ಟೂರ್ನಿಗಳಿಗೆ ಪ್ರಯಾಣಿಸಲಾರಂಭಿಸಿದ್ದರು. ಪೋಷಕರ ತ್ಯಾಗ ಮತ್ತು ಶ್ರಮಕ್ಕೆ ಇಂದು ಗುಕೇಶ್‌ ಚೆಸ್​ನಲ್ಲಿ ಮಿಂಚುವ ಮೂಲಕ ಅವರಿಗೂ ಕೀರ್ತಿ ತಂದಿದ್ದಾನೆ. 12ನೇ ವರ್ಷದಲ್ಲೇ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದರು/

ಗುಕೇಶ್​ 2006ರ ಮೇ 29ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿ ಅಲ್ಲೇ ಬೆಳೆದಿದ್ದರೂ, ಅವರ ಮಾತೃಭಾಷೆ ತೆಲುಗು. ಯಾಕೆಂದರೆ ಅವರ ಕುಟುಂಬದ ಮೂಲ ಆಂಧ್ರ ಪ್ರದೇಶದ ಗೋದಾವರಿ ಆಗಿದೆ. ಪ್ರಶಸ್ತಿ ಗೆದ್ದ​ ಗುಕೇಶ್​ಗೆ 11.03 ಕೋಟಿ ರೂ. ಮತ್ತು ರನ್ನರ್​ಅಪ್​ ಲಿರೆನ್​ಗೆ 10.18 ಕೋಟಿ ರೂ. ದೊರೆಯಲಿದೆ.

ಶಾಲೆಯಲ್ಲೇ ಮೊದಲು ಚೆಸ್‌ ಕಲಿತದ್ದು

ಗುಕೇಶ್‌ ತಮ್ಮ ಏಳನೇ ವಯಸ್ಸಿನಲ್ಲಿ ವೇಲಮ್ಮಾಳ್ ಶಾಲೆಯಲ್ಲಿ ಮೊದಲು ಚೆಸ್‌ ಬಗ್ಗೆ ತಿಳಿದುಕೊಂಡಿದ್ದರಂತೆ. ನಂತರ ಆಟದ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡ ಇವರು ತಮ್ಮ ಮೊದಲ ಚೆಸ್‌ ಗುರು ಭಾಸ್ಕರ್‌ ವಿ. ಅವರ ಮಾರ್ಗದರ್ಶನದಲ್ಲಿ ತರಬೇತಿ ಪ್ರಾರಂಭಿಸಿದ್ದರು. ಮೊದಲಿನಿಂದಲೇ ಆಟದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರಿಂದ ಚೆಸ್‌ನಲ್ಲಿ ಪಳಗಲು ಹೆಚ್ಚು ದಿನ ಬೇಕಿರಲಿಲ್ಲ. ತಮ್ಮ 12ನೇ ವಯಸ್ಸಿನಲ್ಲಿಯೇ ಗುಕೇಶ್ ಭಾರತದ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರ ಹೊಮ್ಮಿದ್ದರು. ನಂತರ ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ, ಗುಕೇಶ್ ಐದು ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.

ಇದನ್ನೂ ಓದಿ Vishwavani Editorial: ಗುಕೇಶ್ ಗೆಲುವು ಭಾರತದ ಪಾಲಿಗೆ ಸುವರ್ಣ ವರ್ಷ

ತಮ್ಮ 12ನೇ ವಯಸ್ಸಿನಲ್ಲಿ ಗುಕೇಶ್‌ 2017ರಲ್ಲಿ 34ನೇ ಕ್ಯಾಪೆಲ್ಲೆ-ಲಾ-ಗ್ರ್ಯಾಂಡೆ ಓಪನ್‌ನಲ್ಲಿ ಇಂಟರ್‌ನ್ಯಾಷನಲ್‌ ಮಾಸ್ಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ಏಪ್ರಿಲ್​ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಸ್ಪರ್ಧೆಯಾದ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮೂರನೇ ಕಿರಿಯ ಆಟಗಾರನೆನಿಸಿಕೊಂಡಿದ್ದರು. ಇದರ ಜೊತೆಗೆ ಈ ಪಂದ್ಯಾವಳಿಯಲ್ಲಿ 9 ಅಂಕ ಗಳಿಸಿ ಪಂದ್ಯಾವಳಿಯನ್ನು ಗೆದ್ದುಕೊಂಡಿದಲ್ಲದೆ, ಕೇವಲ 17ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದರು. ಇದೀಗ ವಿಶ್ವ ಚಾಂಪಿಯನ್‌ ಆಗುವ ಮೂಲಕ ಮನೆ ಮಾತಾಗಿದ್ದಾರೆ.