ಚೆನ್ನೈ: ವಿಶ್ವ ಚದುರಂಗ ಚಕ್ರವರ್ತಿಯಾಗಿ ಹೊರಹೊಮ್ಮಿದ(world chess champion) ದೊಮ್ಮರಾಜು ಗುಕೇಶ್(D Gukesh) ಸ್ವದೇಶಕ್ಕೆ ಮರಳಿದ್ದಾರೆ. ಸೋಮವಾರ ಚೆನ್ನೈಗೆ ಆಗಮಿಸಿದ ಗುಕೇಶ್‌ಗೆ ಭವ್ಯವಾದ ಸ್ವಾಗತ ದೊರೆಯಿತು(welcome for D Gukesh). ಚೆನ್ನೈ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ನಿಲ್ದಾಣದ ಸಿಬ್ಬಂದಿ ಚಪ್ಪಾಳೆಯ ಮೂಲಕ ಅವರನ್ನು ಸ್ವಾಗತಿಸಿದರು. ಚೆಸ್ ಬೋರ್ಡ್ ರೀತಿಯಲ್ಲಿ ವಿನ್ಯಾಸಗೊಳಿಸಿದ ಕಾರಿನಲ್ಲಿ ಅವರನ್ನು ಮೆರವಣಿಗೆ ಮೂಲಕ ಗೌರವಿಸಲಾಯಿತು.
‘ನಾನು ತುಂಬಾ ಖುಷಿಯಾಗಿದ್ದೇನೆ. ಪ್ರತಿಯೊಬ್ಬರೂ ನನ್ನನ್ನು ಅಭಿನಂದಿಸಿದ್ದಾರೆ. ನನ್ನನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು. ಇದೊಂದು ರೋಮಾಂಚಕಾರಿ ಮತ್ತು ಸಂಭ್ರಮದ ಕ್ಷಣ’ ಎಂದು ಗುಕೇಶ್ ಪ್ರತಿಕ್ರಿಯಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸ್ವಾಗತ ಸ್ವೀಕರಿಸಿದ ಬಳಿಕ ಗುಕೇಶ್ ವೆಲ್ಲಮಲ್ ಇಂಟರ್‌ನ್ಯಾಶನಲ್ ಶಾಲೆಗೆ ತೆರಳಿದರು.
ಚೀನಾದ ಡಿಂಗ್ ಲಿರೆನ್ಗೆ 14ನೇ ಹಾಗೂ ಕೊನೇ ಕ್ಲಾಸಿಕ್ ಪಂದ್ಯದಲ್ಲಿ ಸೋಲುಣಿಸುವ ಮೂಲಕ 7.5 ಅಂಕಗಳೊಂದಿಗೆ ಗುರುವಾರ 18ನೇ ವಿಶ್ವ ಚದುರಂಗ ಚಕ್ರವರ್ತಿಯಾಗಿ 18 ವರ್ಷದ ದೊಮ್ಮರಾಜು ಗುಕೇಶ್ ಹೊರಹೊಮ್ಮಿದರು. ಶುಕ್ರವಾರದಂದು ತ್ರಿವರ್ಣ ಧ್ವಜವನ್ನು ಗರ್ವದಿಂದ ಭುಜದ ಮೇಲೆ ಹಾಕಿಕೊಂಡು ವಿಶ್ವ ಚೆಸ್ ಚಾಂಪಿಯನ್ಷಿಪ್ ಟ್ರೋಫಿಯನ್ನು ಸ್ವೀಕರಿಸಿದ್ದರು. ಒಟ್ಟಾರೆ ಬಹುಮಾನ ಮೊತ್ತ 21.21 ಕೋಟಿ ರೂ.ಗಳಲ್ಲಿ ಚಾಂಪಿಯನ್ ಗುಕೇಶ್‌ಗೆ 11.03 ಕೋಟಿ ರೂ. ಮತ್ತು ರನ್ನರ್ಅಪ್ ಲಿರೆನ್ಗೆ 10.18 ಕೋಟಿ ರೂ. ದೊರಕಿದೆ.
18 ವರ್ಷ, 8 ತಿಂಗಳು, 14 ದಿನ ವಯಸ್ಸಿನ ಡಿ. ಗುಕೇಶ್ ಅತಿ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎನಿಸಿದ್ದಾರೆ. ರಷ್ಯಾದ ಗ್ಯಾರಿ ಕ್ಯಾಸ್ಪರೋವ್ 1985ರಲ್ಲಿ 22 ವರ್ಷ, 6 ತಿಂಗಳು, 27 ದಿನ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದು ಹಿಂದಿನ ದಾಖಲೆ.
ಡಿ. ಗುಕೇಶ್ ಅವರದು ಆಂಧ್ರ ಮೂಲದ ತೆಲುಗು ಕುಟುಂಬ ಮತ್ತು ಅವರು ನೆಲೆಸಿರುವುದು ತಮಿಳುನಾಡಿನಲ್ಲಿ. ಅವರು ಪ್ರಶಸ್ತಿ ಗೆಲ್ಲುತ್ತಿದ್ದಂತೆ ತಮಿಳು-ತೆಲುಗು ಭಾಷಿಕರ ನಡುವೆ ಇವ ನಮ್ಮವ ಎಂಬ ವಾಕ್ಸಮರವಾಗಿತ್ತು. ಚೆನ್ನೈನಲ್ಲಿ ನೆಲೆಸಿ ಚದುರಂಗ ಚಕ್ರವರ್ತಿ ಎನಿಸಿರುವ ಗುಕೇಶ್‌ಗೆ ತಮಿಳುನಾಡು ಸರ್ಕಾರ ಟೂರ್ನಿಗೆ ಮುನ್ನವೂ ಆರ್ಥಿಕ ನೆರವು ನೀಡಿತ್ತು. ಹೀಗಾಗಿ ಗೆಲುವಿನ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅಭಿನಂದಿಸಿದ್ದು, ಇಡೀ ತಮಿಳುನಾಡಿನೆಲ್ಲೆಡೆ ಕೂಡ ಸಂಭ್ರಮಿಸಲಾಗಿದೆ. ಇದರ ನಡುವೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತೆಲುಗು ಹುಡುಗ ಎಂದು ಸಂಬೋಧಿಸಿ, ಇಡೀ ತೆಲುಗು ಭಾಷಿಕರಿಗೆ ಹೆಮ್ಮೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ತಮಿಳು ಮತ್ತು ತೆಲುಗು ಭಾಷಿಕರ ನಡುವೆ ಜಟಾಪಟಿ ಜೋರಾಗಿತ್ತು.