Saturday, 23rd November 2024

ಡ್ಯಾಶಿಂಗ್ ಓಪನರ್’ಗೆ 42ರ ಸಂಭ್ರಮ

ನವದೆಹಲಿ: ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್, ಸಚಿನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ಶೈಲಿಯನ್ನೇ ನೆನಪಿಸುವ ವೀರೇಂದ್ರ ಸೆಹವಾಗ್ ಅವರ ಹುಟ್ಟುಹಬ್ಬ ಇಂದು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವೀರೂಗೆ ಶುಭಾಶಯ ಕೋರಿದ್ದಾರೆ. ಹ್ಯಾಪಿ ಬರ್ತ್ ಡೇ ವೀರೇಂದ್ರ ಸೆಹವಾಗ್ ಭಾಯ್, ಮುಂದಿನ ದಿನಗಳು ಉತ್ತಮವಾಗಿರಲಿ ಎಂದು ಶುಭ ಹಾರೈಸಿದ್ದಾರೆ. ತಮ್ಮ ಪಾಸಿಟಿವ್ ಆಟ ಹಾಗೂ ಸ್ವನಂಬಿಕೆ ಯಿಂದಲೇ ಪ್ರತಿಯೊಬ್ಬರ ಕಣ್ಮಣಿಯಾದ ವೀರೂಗೆ ಟೆಸ್ಟ್ ಸ್ಪೆಶಲಿಸ್ಟ್ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

ಟೀಂ ಇಂಡಿಯಾ ಕಂಡ ಅತ್ಯುತ್ತಮ ಫೀಲ್ಡರ್ ಸುರೇಶ್ ರೈನಾ, ನನ್ನ ಇನ್‍‍ಸ್ಪಿರೇಶನ್ ಮತ್ತು ಮಾರ್ಗ ದರ್ಶಕ ವೀರೂಭಾಯಿಗೆ ಶುಭ ಕೋರಿದ್ದು, ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ವೀರೂನ ಸಾಧನೆಗಳ ಪಟ್ಟಿಯೊಂದಿಗೆ ಸ್ಪೋಟಕ ಆಟಗಾರನಿಗೆ ಶುಭ ಹಾರೈಸಿದೆ. 17253 ರನ್ನುಗಳು. ಟೆಸ್ಟ್ ಕ್ರಿಕೆಟ್‍‍ನಲ್ಲಿ ಎರಡು ಬಾರಿ ತ್ರಿಶತಕ ಬಾರಿಸಿದ ಏಕೈಕ ಭಾರತೀಯ. ಏಕದಿನ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಮೂವರು ಭಾರತೀಯರ ಪೈಕಿ, ವೀರೂ ಕೂಡ ಒಬ್ಬರು. ಭಾರತದ ಆರಂಭಿಕ ಹಾಗೂ ಘಾತಕ ಬ್ಯಾಟ್ಸ್ಮನ್’ಗೆ ಕ್ರಿಕೆಟ್‍ ಆಸ್ಟ್ರೇಲಿಯಾ ಶುಭ ಹಾರೈಸಿದೆ.

ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಇವರ ಆಟ ಎಷ್ಟು ಅಪಾಯಕಾರಿಯೋ, ಅಷ್ಟೇ ಅಪಾಯಕಾರಿ ಇವರ ಇತ್ತೀಚಿನ ನಟನೆ ಎಂದು ವೀರೂಗೆ ಶುಭ ಹಾರೈಸಿದ್ದಾರೆ.  12 ವರ್ಷಗಳ ವೃತ್ತಿಯಲ್ಲಿ 104 ಟೆಸ್ಟ್ ಪಂದ್ಯಗಳನ್ನಾಡಿರುವ ಸೆಹವಾಗ್, 49.34 ರ ಸರಾಸರಿಯಲ್ಲಿ 8586 ರನ್‍ ಪೇರಿಸಿದ್ದಾರೆ. ಅದರಲ್ಲಿ 23 ಶತಕ ಮತ್ತು 32 ಅರ್ಧಶತಕಗಳು ಸೇರಿವೆ.

ಎರಡು ತ್ರಿಶತಕ ಬಾರಿಸಿದ ಸೆಹವಾಗ್, ಡಾನ್ ಬ್ರಾಡ್ಮನ್ ಮತ್ತು ಬ್ರಿಯಾನ್ ಲಾರಾ ಅವರ ಸಾಲಿಗೆ ಸೇರಿದರು. 278 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದರು. 2008ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ತಂಡದೆದುರು 304 ಎಸೆತಗಳಲ್ಲಿ 319 ಬಾರಿಸಿದ್ದರು. ಅದರಲ್ಲಿ 42 ಬೌಂಡರಿಗಳು ಮತ್ತು ಐದು ಸಿಕ್ಸರ್ ಸೇರಿದ್ದವು. 2004ರಲ್ಲಿ ಮುಲ್ತಾನಿನಲ್ಲಿ ಪಾಕಿಸ್ತಾನ ವಿರುದ್ದ ಮೊದಲ ತ್ರಿಶತಕ ಬಾರಿಸಿದ್ದರು. 251 ಏಕದಿನ ಪಂದ್ಯಗಳಿಂದ 8273 ರನ್‍ ಬಾರಿಸಿದ್ದಾರೆ. ಅದರಲ್ಲಿ 15 ಶತಕ ಮತ್ತು 38 ಅರ್ಧಶತಕಗಳು ಸೇರಿವೆ.

2015ರ ಅಕ್ಟೋಬರ್’ನಲ್ಲಿ ಸೆಹ್ವಾಗ್ ತಮ್ಮ ಆಟಕ್ಕೆ ವಿರಾಮ ಹೇಳಿದರು.