Saturday, 23rd November 2024

ಅತ್ಯಾಚಾರ ಪ್ರಕರಣ: ಕ್ರಿಕೆಟಿಗ ಗುಣತಿಲಕ ಖುಲಾಸೆ

ಕೊಲಂಬೊ: ಕಳೆದ ಟಿ20 ವಿಶ್ವಕಪ್​ ಕ್ರಿಕೆಟ್‌ ಟೂರ್ನಿ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಲೈಂಗಿಕ ಕಿರುಕುಳದ ಗಂಭೀರ ಆರೋಪದಡಿ ಯಲ್ಲಿ ಶ್ರೀಲಂಕಾ ಕ್ರಿಕೆಟಿಗ ​ದನುಷ್ಕಾ ಗುಣತಿಲಕ ಅವರು ನಿಷೇಧ ಶಿಕ್ಷೆಗೊಳಗಾಗಿದ್ದರು.

ಬಳಿಕ ಪ್ರಕರಣದ ತನಿಖೆ ನಡೆದು ಈ ಆರೋಪದಿಂದ ಗುಣತಿಲಕರನ್ನು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಜಿಲ್ಲಾ ನ್ಯಾಯಾಲಯ ಖುಲಾಸೆ ಗೊಳಿಸಿದೆ. ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ನಿಷೇಧ ತೆರವುಗೊಳಿಸಿದೆ.

ಗುಣತಿಲಕ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧದ ಒಂದು ಪಂದ್ಯದಲ್ಲಿ ಮಾತ್ರ ಪಾಲ್ಗೊಂಡಿದ್ದರು. ನಂತರ ಗಾಯಗೊಂಡು ಹೊರಗುಳಿದಿದ್ದರು. ಕಳೆದ 11 ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಪ್ರಯಾಣ ನಿರ್ಬಂಧದಲ್ಲಿದ್ದ ಇವರು ನ್ಯೂ ಸೌತ್ ವೇಲ್ಸ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಸಂಪೂರ್ಣ ವಿಚಾರಣೆ ಎದುರಿಸಿದ್ದಾರೆ. ಬಳಿಕ ತಮ್ಮ ವಿರುದ್ಧದ ಆರೋಪದಿಂದ ಮುಕ್ತಗೊಂಡರು.

ಅಕ್ಟೋಬರ್​ 3 ರಂದು ಗುಣತಿಲಕ ಶ್ರೀಲಂಕಾಗೆ ಮರಳಿದ್ದಾರೆ. ದೋಷಮುಕ್ತ ಎಂದು ಕೋರ್ಟ್​ ತೀರ್ಪು ನೀಡಿದ ನಂತರ ಶ್ರೀಲಂಕಾ ಉಚ್ಚ ನ್ಯಾಯಾ ಲಯದ ನಿವೃತ್ತ ನ್ಯಾಯಾಧೀಶ ಸಿಸಿರ ರತ್ನಾಯಕ, ನಿರೋಶನ ಪೆರೇರಾ, ವಕೀಲರಾದ ನಿರೋಷನ ಪೆರೇರಾ, ಅಸೆಲಾ ರೇಕಾವಾ ನೇತೃತ್ವದ ವಿಚಾರಣಾ ಸಮಿತಿ ನಿಷೇಧವನ್ನು ತಕ್ಷಣವೇ ತೆಗೆದುಹಾಕುವಂತೆ ಸರ್ವಾನುಮತದ ಶಿಫಾರಸು ಮಾಡಿತು. ಗುಣತಿಲಕ ನಿಯಮಿತ ಕ್ರಿಕೆಟ್ ಚಟುವಟಿಕೆಗಳನ್ನು ಪುನಾರಂಭಿಸಲು ಮತ್ತು ರಾಷ್ಟ್ರೀಯ ತಂಡಕ್ಕೆ ಮರಳಲು ಈ ಮೂಲಕ ಅವಕಾಶ ಮಾಡಿಕೊಟ್ಟಿದ್ದಾರೆ.

2022ರ ಟಿ20 ವಿಶ್ವಕಪ್‌ ಸಂದರ್ಭದಲ್ಲಿ ತನ್ನ ಮೇಲೆ ಗುಣತಿಲಕ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಆಸ್ಟ್ರೇಲಿಯಾ ಮಹಿಳೆ ಆರೋಪಿಸಿದ್ದರು. ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಗುಣತಿಲಕರನ್ನು ಸಿಡ್ನಿ ಪೊಲೀಸರು ನವೆಂಬರ್ 2022ರಲ್ಲಿ ಬಂಧಿಸಿದ್ದರು. ಕೆಲ ಸಮಯದ ಹಿಂದೆ ಗುಣತಿಲಕ 29 ವರ್ಷದ ಮಹಿಳೆಯನ್ನು ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದರು. ನವೆಂಬರ್ 2ರಂದು ರೋಸ್ ಬೇನಲ್ಲಿರುವ ಹೋಟೆಲ್ ಕೊಠಡಿಯಲ್ಲಿ ಇಬ್ಬರು ಭೇಟಿಯಾಗಿದ್ದರು. ನಂತರ ದನುಷ್ಕಾ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.

ತಂಡದಲ್ಲಿ ನಾಯಕ ದುಸನ್​ ಶನಕ ಗಾಯದಿಂದ ಹೊರಗಿದ್ದರೂ ಅವರು ಈಗ ನಡೆಯುತ್ತಿರುವ ವಿಶ್ವಕಪ್‌ನ ಭಾಗವಾಗುವುದು ಸಾಧ್ಯವಿಲ್ಲ. ಪಾತುಮ್ ನಿಸ್ಸಾಂಕ ಆರಂಭಿಕರಾಗಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಗುಣತಿಲಕ ಪ್ರಾಥಮಿಕವಾಗಿ ಆರಂಭಿಕ ಆಟಗಾರರಾಗಿದ್ದಾರೆ. 8 ಟೆಸ್ಟ್, 47 ಏಕದಿನ ಮತ್ತು 46 ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿದ್ದಾರೆ.