Thursday, 19th September 2024

Dhruv Jurel : ಧೋನಿ ದಾಖಲೆ ಸರಿಗಟ್ಟಿದ ಯುವ ವಿಕೆಟ್‌ಕೀಪರ್‌ ಧ್ರುವ್‌ ಜುರೆಲ್‌

Dhruv Jurel

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ‘ಬಿ’ ವಿರುದ್ಧದ ದುಲೀಪ್ ಟ್ರೋಫಿ ಪಂದ್ಯದ ಇನ್ನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಭಾರತ ಎ ತಂಡ ವಿಕೆಟ್‌ ಕೀಪರ್‌ ಧ್ರುವ್‌ ಜುರೆಲ್‌ (Dhruv Jurel) ಸಾಧಿಸಿದ್ದಾರೆ. ಈ ವೇಳೆ ಅವರು ಭಾರತ ತಂಡದ ದಿಗ್ಗಜ ವಿಕೆಟ್‌ ಕೀಪರ್‌ ಎಂಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಜುರೆಲ್‌ ವಿಕೆಟ್‌ ಹಿಂದಿನ ಕಾರ್ಯನಿರ್ವಹಣೆಯಲ್ಲಿ ಏಳು ಕ್ಯಾಚ್‌f ಪಡೆದು ಭಾರತ ‘ಬಿ’ ತಂಡವನ್ನು 184 ರನ್‌ಗಳಿಗೆನಿಯಂತ್ರಿಸಲು ನೆರವಾಗಿದ್ದರು.

2004-05ರ ದುಲೀಪ್ ಟ್ರೋಫಿ ಪಂದ್ಯದಲ್ಲಿ ಕೇಂದ್ರ ವಲಯ ವಿರುದ್ಧ ಪೂರ್ವ ವಲಯ ತಂಡ ಆಡುವಾಗ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಏಳು ಕ್ಯಾಚ್‌ ಸಾಧನೆ ಮಾಡಿದ್ದರು. ಇದಕ್ಕೂ ಮುನ್ನ 1973ರ ಫೈನಲ್‌ನಲ್ಲಿ ಉತ್ತರ ವಲಯ ವಿರುದ್ಧ ಕೇಂದ್ರ ವಲಯ ಪರ ಆಡಿದ್ದ ಸುನಿಲ್ ಬೆಂಜಮಿನ್ ಆರು ಕ್ಯಾಚ್‌ಗಳನ್ನು ಹಾಗೂ ಒಂದು ಸ್ಟಂಪಿಂಗ್ ದಾಖಲೆ ಬರೆದಿದ್ದರು. ಅವರು ಕೂಡ ಒಟ್ಟು ಏಳು ವಿಕೆಟ್‌ಗಳನ್ನು ಉರುಳಿಸಿದ್ದರು.

ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಮುಶೀರ್ ಖಾನ್, ಸರ್ಫರಾಜ್ ಖಾನ್, ನಿತೀಶ್ ಕೆ ರೆಡ್ಡಿ, ಸಾಯಿ ಕಿಶೋರ್ ಮತ್ತು ನವದೀಪ್ ಸೈನಿ ಅವರನ್ನು ಔಟ್ ಮಾಡುವಲ್ಲಿ 22 ವರ್ಷದ ಜುರೆಲ್ ಪ್ರಮುಖ ಪಾತ್ರ ವಹಿಸಿದ್ದರು. ಎದುರಾಳಿ ತಂಡವನ್ನು ದಾಟಬಹುದಾದ ಗುರಿಗೆ ಸೀಮಿತಗೊಳಿಸುವ ಭಾರತ ಎ ಪ್ರಯತ್ನದಲ್ಲಿ ಅವರ ವಿಕೆಟ್ ಕೀಪಿಂಗ್ ನಿರ್ಣಾಯಕವಾಗಿತ್ತು. ಆದಾಗ್ಯೂ, ಜುರೆಲ್ ಬ್ಯಾಟಿಂಗ್‌ನಲ್ಇ ಪ್ರದರ್ಶನ ನೀಡಲು ವಿಫಲರಾದರು, ಮೊದಲ ಇನಿಂಗ್ಸ್‌ನಲ್ಲಿ ಹದಿನಾರು ಎಸೆತಗಳಲ್ಲಿ ಕೇವಲ ಎರಡು ರನ್ ಬಾರಿಸಿದ್ದರೆ ಎರಡನೇ ಇನಿಂಗ್ಸ್‌ನಲ್ಲಿ ಗೋಲ್ಡನ್ ಡಕ್ ಆಗಿದ್ದರು.

ದುಲೀಪ್ ಟ್ರೋಫಿಯ ಇನ್ನಿಂಗ್ಸ್ ಒಂದರಲ್ಲಿ ವಿಕೆಟ್ ಕೀಪರ್‌ಗಳು ಪಡದ ಅತಿ ಹೆಚ್ಚು ಕ್ಯಾಚ್‌ಗಳು

  • ಎಂಎಸ್ ಧೋನಿ (ಪೂರ್ವ ವಲಯ) – 2004-05ರಲ್ಲಿ ಕೇಂದ್ರ ವಲಯ ವಿರುದ್ಧ 7 ಕ್ಯಾಚ್‌ಗಳು
  • ಧ್ರುವ್ ಜುರೆಲ್ (ಭಾರತ ಎ) – 2024-25ರಲ್ಲಿ ಭಾರತ ಬಿ ವಿರುದ್ಧ 7 ಕ್ಯಾಚ್‌ಗಳು
  • ಸುನಿಲ್ ಬೆಂಜಮಿನ್ (ಕೇಂದ್ರ ವಲಯ) – 1973-74ರಲ್ಲಿ ಉತ್ತರ ವಲಯ ವಿರುದ್ಧ 6 ಕ್ಯಾಚ್‌ಗಳು
  • ಸದಾನಂದ ವಿಶ್ವನಾಥ್ (ದಕ್ಷಿಣ ವಲಯ) – 1980-81ರಲ್ಲಿ ಕೇಂದ್ರ ವಲಯ ವಿರುದ್ಧ 6 ಕ್ಯಾಚ್‌ಗಳು

ಭಾರತ ‘ಬಿ’ ತಂಡ ಎರಡನೇ ಇನಿಂಗ್ಸ್ ನಲ್ಲಿ 22 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಸರ್ಫರಾಜ್ ಖಾನ್ (36 ಎಸೆತಗಳಲ್ಲಿ 46 ರನ್) ಮತ್ತು ರಿಷಭ್ ಪಂತ್ (47 ಎಸೆತಗಳಲ್ಲಿ 61 ರನ್) 72 ರನ್‌ಗಳ ಆಕ್ರಮಣಕಾರಿ ಜೊತೆಯಾಟದೊಂದಿಗೆ ಪ್ರತಿರೋಧ ತೋರಿದರು. ಆದರೆ ಉಳಿದ ಆಟಗಾರರು ಗಮನಾರ್ಹ ಕೊಡುಗೆ ನೀಡಲು ವಿಫಲವಾದರು. ಅಂತಿಮವಾಗಿ ಭಾರತ ‘ಬಿ’ ತಂಡ 184 ರನ್‌ಗಳಿಗೆ ಆಲೌಟ್ ಆಗಿದ್ದು ಭಾರತ ‘ಎ’ ತಂಡಕ್ಕೆ ಗೆಲ್ಲಲು 275 ರನ್ಗಳ ಟಾರ್ಗೆಟ್ ನೀಡಿದೆ.

ಇದನ್ನೂ ಓದಿ: Moeen Ali : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸಿಎಸ್‌ಕೆ ಆಟಗಾರ ಮೊಯೀನ್ ಅಲಿ

ಭಾರತ ‘ಎ’ ತಂಡದ ಆಕಾಶ್ ದೀಪ್ ಐದು ವಿಕೆಟ್ ಕಬಳಿಸುವ ಮೂಲಕ ಬೌಲಿಂಗ್ ದಾಳಿ ಮುನ್ನಡೆಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ‘ಎ’ ತಂಡ ಕೆಎಲ್ ರಾಹುಲ್ (20) ಹಾಗೂ ತನುಷ್ ಕೋಟ್ಯಾನ್ (0) ಕ್ರೀಸ್ ನಲ್ಲಿದ್ದು, 15 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ. ಭಾರತ ‘ಎ’ ತಂಡಕ್ಕೆ ಇನ್ನೂ 63 ಓವರ್ ಗಳು ಬಾಕಿ ಇದ್ದು 199 ರನ್ ಗಳಿಸಬೇಕಿದೆ.