Friday, 20th September 2024

ದೇಶೀಯ ಟೂರ್ನಿಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಂಪರ್‌

ಮುಂಬೈ: ದೇಶೀಯ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳ ಜೊತೆ ಬಹುಮಾನ ಮೊತ್ತ ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ. ಈ ಮೂಲಕ ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಪ್ರೋತ್ಸಾಹಿಸಲು ಬಿಸಿಸಿಐ ಮುಂದಾಗಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶೀಘ್ರದಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಮುಂಬರುವ ಐಸಿಸಿ ಚುನಾವಣೆಯಲ್ಲಿ ಜಯ್ ಶಾ ಸ್ಪರ್ಧಿಸಲಿದ್ದು, ಈ ಮೂಲಕ ವಿಶ್ವ ಕ್ರಿಕೆಟ್​​ನ ಮುಖ್ಯಸ್ಥರಾಗುವ ಹಂಬಲದಲ್ಲಿದ್ದಾರೆ. ಆದರೆ ಇದಕ್ಕೂ ಮುನ್ನ ಜಯ್ ಶಾ ದೇಶೀಯ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ ತಂದಿರುವುದು ವಿಶೇಷ.

ಈ ಅನುಕ್ರಮವು ಎಲ್ಲಾ ಮಹಿಳಾ ಮತ್ತು ಜೂನಿಯರ್ ಕ್ರಿಕೆಟ್ ಪಂದ್ಯಾವಳಿಗಳಿಗೂ ಅನ್ವಯವಾಗಲಿದೆ. ವಿಜಯ್ ಹಝಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಗಳಲ್ಲೂ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳೊಂದಿಗೆ ಬಹುಮಾನ ಮೊತ್ತವಾಗಿ ಹಣವನ್ನು ನೀಡಲಿದ್ದೇವೆ ಎಂದು ಶಾ ಎಕ್ಸ್​ ಮೂಲಕ ತಿಳಿಸಿದ್ದಾರೆ.

ದೇಶೀಯ ಸರ್ಕ್ಯೂಟ್‌ನಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ಗುರುತಿಸುವ ಮತ್ತು ಬಹುಮಾನ ನೀಡುವ ಗುರಿಯನ್ನು ಹೊಂದಿದ್ದೇವೆ. ಇಂತಹ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿರುವ ಅಪೆಕ್ಸ್ ಕೌನ್ಸಿಲ್‌ಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಬಿಸಿಸಿಐ ಕಳೆದ 3-4 ವರ್ಷಗಳಿಂದ ದೇಶೀಯ ಕ್ರಿಕೆಟ್​ ಆಡುವ ಆಟಗಾರರ ವೇತನವನ್ನು ಹೆಚ್ಚಿಸಿದೆ. ಅಲ್ಲದೆ ಎರಡು ವರ್ಷಗಳ ಹಿಂದೆ, ಮಂಡಳಿಯು ಎಲ್ಲಾ ಮೂರು ಮಾದರಿಗಳ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಹಿಳಾ ಆಟಗಾರರ ಪಂದ್ಯದ ಶುಲ್ಕವನ್ನು ಪುರುಷ ಆಟಗಾರರಿಗೆ ಸಮನಾಗಿರುತ್ತದೆ ಎಂದು ಘೋಷಿಸಿತ್ತು. ಇದಕ್ಕೂ ಮೊದಲು ರಣಜಿ ಟ್ರೋಫಿ ಆಡುವ ಆಟಗಾರರ ಪಂದ್ಯ ಶುಲ್ಕವನ್ನು ಮಂಡಳಿಯು ದ್ವಿಗುಣಗೊಳಿಸಿತ್ತು.