Saturday, 14th December 2024

ದ್ರಾವಿಡ್‌ ಕೋಚ್ ಆಗಿ ಮುಂದುವರಿಯಲು ಮತ್ತೆ ಅರ್ಜಿ ಸಲ್ಲಿಸಬೇಕು: ಜಯ್‌ ಶಾ

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌, ತಮ್ಮ ಅವಧಿ ಮುಕ್ತಾಯದ ನಂತರವೂ ಮುಂದುವರಿಯಲು ಬಯಸುವು ದಾದರೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮುಖ್ಯ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ದ್ರಾವಿಡ್‌ ಅವರ ಅವಧಿ ಮುಗಿಯಲಿದೆ.

ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ಎರಡು ವರ್ಷಗಳ ಅವಧಿಗೆ ನೇಮಕಗೊಂಡಿದ್ದ ದ್ರಾವಿಡ್‌ ಅವರ ಒಪ್ಪಂದ ಹಾಗೂ ಅವರ ಸಹಾಯಕ ಸಿಬ್ಬಂದಿಯ ಅವಧಿಯನ್ನು, ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್‌ ಬಳಿಕ ಒಂದು ವರ್ಷ ವಿಸ್ತರಿಸಲಾಗಿತ್ತು.

ರಾಹುಲ್ ದ್ರಾವಿಡ್‌ ಅವರ ಅವಧಿಯು ಮುಕ್ತಾಯವಾಗುತ್ತಿದೆ. ಮುಂದುವರಿಯಲು ಬಯಸುವುದಾದರೆ, ಅವರು ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಾವು ಮೂರು ವರ್ಷಗಳ ದೀರ್ಘಾವಧಿಗೆ ಕೋಚ್‌ ನೇಮಿಸಲು ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

‘ಕ್ರಿಕೆಟ್‌ ಸಲಹಾ ಸಮಿತಿಗೆ (ಸಿಎಸಿ) ಅಂತಿಮ ನಿರ್ಧಾರವನ್ನು ಬಿಡಲಾಗಿದೆ. ಅವರ ತೀರ್ಮಾನವನ್ನು ಕಾರ್ಯರೂಪಕ್ಕಿಳಿಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ವಿದೇಶಿ ಕೋಚ್‌ ಅನ್ನು ಆಯ್ಕೆ ಮಾಡಿದರೂ, ಅದರಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ’ ಎಂದೂ ಹೇಳಿದ್ದಾರೆ.

ಜತಿನ್‌ ಪರಾಂಜಪೆ, ಅಶೋಕ್‌ ಮಲ್ಹೋತ್ರಾ ಮತ್ತು ಸುಲಕ್ಷಣಾ ನಾಯಕ್‌ ಅವರು ಸಿಎಸಿಯಲ್ಲಿದ್ದಾರೆ.