ಲಂಡನ್: ಹಂಗಾಮಿ ನಾಯಕ ಹ್ಯಾರಿ ಬ್ರೂಕ್(87) ಮತ್ತು ಲಿವಿಂಗ್‌ಸ್ಟೋನ್(62*) ಅವರ ಬ್ಯಾಟಿಂಗ್ ಆರ್ಭಟದ ಮುಂದೆ ಮಂಕಾದ ಪ್ರವಾಸಿ ಆಸ್ಟ್ರೇಲಿಯಾ(ENG vs AUS) ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 186 ರನ್‌ಗಳ ಹೀನಾಯ ಸೋಲು ಕಂಡಿದೆ. ಸರಣಿಯನ್ನು ಜೀವಂತವಿರಿಸಬೇಕಿದ್ದರೆ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಆಂಗ್ಲರು ಗೆದ್ದು 5 ಪಂದ್ಯಗಳ ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದಾರೆ. ಸರಣಿ ನಿರ್ಣಾಯಕ ಪಂದ್ಯ ನಾಳೆ(ಭಾನುವಾರ) ನಡೆಯಲಿದೆ.
ಶುಕ್ರವಾರ ತಡರಾತ್ರಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಜೋಶ್‌ನಿಂದಲೇ ಬ್ಯಾಟ್ ಬೀಸಿ ನಿಗದಿತ 39 ಓವರ್‌ಗಳಲ್ಲಿ 5 ವಿಕೆಟ್‌ಗೆ 312 ರನ್‌ಗಳ ಬೃಹತ್ ಸವಾಲು ನೀಡಿತು. ಜವಾಬಿತ್ತ ಆಸ್ಟ್ರೇಲಿಯಾ ನಾಟಕೀಯ ಕುಸಿತ ಕಂಡು 24.4 ಓವರ್‌ಗಳಲ್ಲಿ ಕೇವಲ 126 ರನ್ ಬಾರಿಸಿ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್, ಬ್ರೈಡನ್ ಕಾರ್ಸ್ ಮತ್ತು ಆದಿಲ್ ರಶೀದ್ ತಲಾ 3 ವಿಕೆಟ್ ಕಿತ್ತರೆ, ಅನುಭವಿ ಜೋಫ್ರಾ ಆರ್ಚರ್ 2 ವಿಕೆಟ್ ಪಡೆದರು.
ಸ್ಟಾರ್ಕ್‌ಗೆ ಚಳಿ ಬಿಡಿಸಿದ ಲಿವಿಂಗ್‌ಸ್ಟೋನ್
ಮಧ್ಯಮ ಕ್ರಮಾಂಕದ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಸಿಡಿಲಬ್ಬರ ಬ್ಯಾಟಿಂಗ್ ನಡೆಸಿ 27 ಎಸೆತಗಳಿಂದ ಅಜೇಯ 62 ರನ್ ಬಾರಿಸಿ ಗಮನಸೆಳೆದರು. ಅವರ ಈ ಬಿರುಸಿನ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 7 ಸಿಕ್ಸರ್ ಮತ್ತು 3 ಬೌಂಡರಿ ಸಿಡಿಯಿತು. ಮಿಚೆಲ್ ಸ್ಟಾರ್ಕ್ ಎಸೆದ ಪಂದ್ಯದ ಅಂತಿಮ ಓವರ್‌ನಲ್ಲಿ ಸಿಡಿದು ನಿಂತ ಲಿವಿಂಗ್‌ಸ್ಟೋನ್ 4 ಗಗನಚುಂಬಿ ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿ 28 ರನ್ ದೋಚಿದರು.
ಹಂಗಾಮಿ ನಾಯಕ ಹ್ಯಾರಿ ಬ್ರೂಕ್ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಬ್ರೂಕ್ 58 ಎಸೆತಗಳಿಂದ 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 87 ರನ್ ಕಲೆಹಾಕಿದರು. ಉಳಿದಂತೆ ಬೆನ್ ಡಕೆಟ್(63), ಜೇಮೀ ಸ್ಮಿತ್(39) ರನ್ ಪೇರಿಸಿದರು.
ಇದನ್ನೂ ಓದಿ R Ashwin: ಕುಂಬ್ಳೆ ದಾಖಲೆ ಹಿಂದಿಕ್ಕಿದ ಅಶ್ವಿನ್
ಆಸ್ಟ್ರೇಲಿಯಾ ಪರ ಆರಂಭಿಕರಾದ ಮಿಚೆಲ್ ಮಾರ್ಷ್(28) ಮತ್ತು ಟ್ರಾವಿಸ್ ಹೆಡ್(34) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಾಣಲಿಲ್ಲ. ಅನುಭವಿ ಸ್ವೀವನ್ ಸ್ಮಿತ್ ಈ ಪಂದ್ಯದಲ್ಲಿಯೂ ಬ್ಯಾಟಿಂಗ್ ವೈಫಲ್ಯ ಕಂಡರು. ಅವರ ಗಳಿಕೆ 5ರನ್. ಆಡಿದ 4 ಪಂದ್ಯಗಳಲ್ಲಿಯೂ ಅವರು ನಿರೀಕ್ಷಿತ ಪ್ರದರ್ಶನ ತೋರಿಲ್ಲ. ನಂಬಿಕಸ್ಥ ಬ್ಯಾಟರ್ ಮಾರ್ನಸ್ ಲಬೆಶೇನ್(4) ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ಇದು ತಂಡದ ಹಿನ್ನಡೆಗೆ ಕಾರಣವಾಯಿತು.